ರಸಗೊಬ್ಬರ ದರ ಇಳಿಸಲು ರೈತರ ಆಗ್ರಹ ; ಕಬ್ಬಿಗೆ ಯೂರಿಯಾ ವಿತರಿಸಲು ಕೃಷಿ ಜೆಡಿಗೆ ಕಬ್ಬು ಬೆಳೆಗಾರರ ಸಂಘದ ಮನವಿ

Haveri, Agri, JD, Sugar Cane, Farmers, Problems,
Haveri, Agri, JD, Sugar Cane, Farmers, Problems,
Published on
ಹಾವೇರಿ: ದಿನೇ ದಿನೇ ಹೆಚ್ಚುತ್ತಿರುವ ರಸಗೊಬ್ಬರ ಬೆಲೆಯನ್ನು ತಕ್ಷಣವೇ ಹಿಂಪಡೆಯಬೇಕು. ರಸಗೊಬ್ಬರ ಖರೀದಿಗೆ ಕಡ್ಡಾಯಗೊಳಿಸಿರುವ ಎಫ್‌ಐಡಿ ನಿಯಮ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ ಪದಾಧಿಕಾರಿಗಳು ಹಾವೇರಿ ಡಿಸಿ ಕಚೇರಿಯಲ್ಲಿ ಶುಕ್ರವಾರ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಪ್ರಸ್ತುತ ಕೃಷಿ ವಲಯದಲ್ಲಿ ಬೀಜ, ರಸಗೊಬ್ಬರ, ಕೂಲಿ, ಡೀಸೆಲ್, ಕೀಟನಾಶಕಗಳ ವೆಚ್ಚ ದುಬಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಮತ್ತು ರಸಗೊಬ್ಬರ ಕಂಪನಿಗಳು ರಸಗೊಬ್ಬರಗಳ ಬೆಲೆಯನ್ನು ನಿರಂತರವಾಗಿ ಹೆಚ್ಚಿಸಿರುವುದು ರೈತರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಪೂರೈಸಬೇಕು ಎಂದರು.
ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯಗೊಳಿಸಿರುವುದು ರೈತ ವಿರೋಧಿ ನಿಯಮವಾಗಿದೆ. ಈ ನಿಯಮದಿಂದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ರೈತ ಕುಟುಂಬಗಳಲ್ಲಿ ಜಮೀನಿನ ಮೂಲ ಮಾಲೀಕರು ಮರಣ ಹೊಂದಿದ್ದು ದಾಖಲೆಗಳು ಅವರ ಹೆಸರಿನಲ್ಲಿಯೇ ಇವೆ. ಹಿರಿಯರ ಹೆಸರಿನಲ್ಲಿರುವ ಭೂಮಿಯಲ್ಲಿ ಮಕ್ಕಳು ಬೇಸಾಯ ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆ ಕೌಟುಂಬಿಕ ವ್ಯಾಜ್ಯ ನ್ಯಾಯಾಲಯದ ಪ್ರಕರಣಗಳಿಂದಾಗಿ ಎಫ್‌ಐಡಿ ನೋಂದಣಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೆಬ್ಬೆರಳಿನ ಗುರುತು ಅಥವಾ ದೃಢೀಕರಣ ಕಡ್ಡಾಯ ಅಥವಾ ಒಟಿಪಿ ಹೇಳಬೇಕು ಎಂಬ ನಿಯಮದಿಂದ ನೈಜ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ತಾಂತ್ರಿಕ ಅಡೆತಡೆಗಳನ್ನು ತಕ್ಷಣ ದೂರಗೊಳಿಸಿ ಹಳೆಯ ಪದ್ಧತಿಯಲ್ಲಿಯೇ ರಸಗೊಬ್ಬರ ವಿತರಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ 25 ಲಕ್ಷಕ್ಕಿಂತ ಹೆಚ್ಚು ಟನ್ ಕಬ್ಬು ಬೆಳೆಯುವ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಎಫ್‌ಐಡಿ ಪ್ರಕಾರ ಒಂದು ಎಕರೆಗೆ ಒಂದು ಚೀಲ ಗೊಬ್ಬರ ಕೊಟ್ಟರೆ ಸಾಕಾಗುವುದಿಲ್ಲ. ಆದಕಾರಣ ಕಬ್ಬು ಬೆಳೆಯುವಂತ ರೈತರಿಗೆ ಉತಾರ ನೋಡಿ ಬೆಳೆ ದೃಢೀಕರಣ ತೆಗೆದುಕೊಂಡು ಒಂದು ಎಕರೆಗೆ ಮೂರು ಚೀಲ ಯೂರಿಯಾ ಗೊಬ್ಬರ ಕೊಡಬೇಕೆಂದು ಒತ್ತಾಯಿಸಿದರು.
ಎಂ.ಎಸ್.ಪಾಟೀಲ, ಮಾಲಿಂಗಪ್ಪ ಬಿದ್ರುಮಳ್ಳಿ, ಶೀಲಾ ಭದ್ರಾವತಿ, ತೌಸಿಪ್ ಹಸನಾಬಾದಿ, ನಸೀಮಾಬಾನು ಲೊಹಾರ, ಕುರ್ಶಿದಾ ಕಬ್ಬೂರ, ಪುಷ್ಪಾ ಅಗಸಿಬಾಗಿಲ, ಚನ್ನಸಪ್ಪ ಅಂಗಡಿ, ಚನ್ನಬಸಯ್ಯ ದೊಡ್ಡಕಂಚತಿನಮಠ, ಶಿವನಗೌಡ ಪಾಟೀಲ, ಆದಮ್ ಖಾನ್ ನೆಗಳೂರ, ಶೇಖಪ್ಪ ಬಸಾಪುರ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net