ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ

Haveri, Agri, Dept, Seeds, RSK,
Haveri, Agri, Dept, Seeds, RSK,
Published on
ಹಾವೇರಿ: ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ರೈತರಿಗೆ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಹಿರೇಮಠ ಚಾಲನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಹಾವೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಮೈದೂರ, ಉಪ ಕೃಷಿ ನಿರ್ದೇಶಕ ಶಿವಕುಮಾರ ಮಲ್ಲಾಡದ ಹಾಗೂ ಪ್ರಭುಗೌಡ ಬಿಷ್ಟನಗೌಡ್ರ ವಿವಿಧ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸುವ ಮೂಲಕ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಎಚ್. ಮಾತನಾಡಿ, ಹಾವೇರಿ, ಕರ್ಜಗಿ, ಗುತ್ತಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೆಗಳೂರು ಮತ್ತು ಹೊಸರಿತ್ತಿ ಗ್ರಾಮಗಳಲ್ಲಿ ಒಟ್ಟು 5 ಕಡೆ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಹಾಗೂ ಈ ಹಿಂದಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ವಿವಿಧ ಬೀಜಗಳ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಿನ ಬಿತ್ತನೆ ಬೀಜಗಳನ್ನು ದಾಸ್ತಾನು ಕೇಂದ್ರಗಳಲ್ಲಿ ಸಂಗ್ರಹಿಸಲಾಗಿದೆ. ಆದ್ದರಿಂದ ರೈತರು ತಮ್ಮ ಹೋಬಳಿಗಳ ಬೀಜ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯಲು ಕೋರಿದರು.
ತಾಲೂಕಿನಲ್ಲಿ ಒಟ್ಟು 55,831 ಹೆಕ್ಟೆರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಪ್ರಮುಖವಾಗಿ ಗೋವಿನಜೋಳ- 49,400 ಹೆಕ್ಟರ್, ಸೊಯಾಬಿನ್-3,584 ಹೆಕ್ಟರ್, ಶೇಂಗಾ-700 ಹೆಕ್ಟೆರ್, ಹೀಗೆ ವಿವಿಧ ಬೆಳೆಗಳ ಗುರಿ ಹೊಂದಲಾಗಿದೆ. ಸೋಯಾಬಿನ್ ಹಾಗೂ ಶೇಂಗಾ ಬೀಜಗಳನ್ನು ಹೆಚ್ಚಿನ ಮಣ್ಣಿನ ಉಷ್ಣಾಂಶ ಸಂದರ್ಭದಲ್ಲಿ ಬಿತ್ತನೆ ಮಾಡಿದ್ದಲ್ಲಿ ಮೊಳಕೆ ಪ್ರಮಾಣ ಕಡಿಮೆಯಾಗುವ ಸಂದರ್ಭ ಇರುವುದರಿಂದ ಮಣ್ಣಿನ ತೇವಾಂಶ ನೋಡಿಕೊಂಡು ಮಣ್ಣಿನ ಉಷ್ಣಾಂಶ ಕಡಿಮೆಯಾದ ನಂತರ ಬಿತ್ತನೆ ಕಾರ್ಯ ಕೈಗೊಳ್ಳಲು ಕೋರಲಾಗಿದೆ.
ಮಳೆ ವಿವರ: ತಾಲೂಕಿನಲ್ಲಿ ಈವರೆಗೆ ಒಟ್ಟು 150 ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆ (89.5ಮಿ.ಮೀ)ಗಿಂತ ಶೇ.68ರಷ್ಟು ಹೆಚ್ಚು ಮಳೆಯಾಗಿರುತ್ತದೆ. ರೈತರು ಭೂಮಿ ಸಿದ್ಧತೆ ಕೈಗೊಂಡಿದ್ದು ಬಿತ್ತನೆಗೆ ಮುಂದಾಗಿರುತ್ತಾರೆ.
ಬಿತ್ತನೆ ಬೀಜ ಪೂರೈಕೆ:
ತಾಲೂಕಿನಲ್ಲಿ ಒಟ್ಟು ಸೊಯಾಬಿನ್ 950 ಕ್ವಿಂಟಾಲ್, ಗೋವಿನಜೋಳ-215.36 ಕ್ವಿಂಟಾಲ್, ತೊಗರಿ-114.90, ಕ್ವಿಂಟಾಲ್, ಹೆಸರು-9.20 ಕ್ವಿಂಟಾಲ್ ಮತ್ತು ಶೇಂಗಾ 101.10 ಕ್ವಿಂಟಾಲ್ ದಾಸ್ತಾನು ಲಭ್ಯವಿರುತ್ತದೆ. ಬೇಡಿಕೆಗೆ ಅನುಗುಣವಾಗಿ ದಾಸ್ತಾನನ್ನು ಪಡೆಯಲಾಗುವುದು. ಬಿತ್ತನೆ ಬೀಜಗಳನ್ನು ಎಲ್ಲಾ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೆರ್ (5 ಎಕರೆ) ಅಥವಾ ಅವರ ಹಿಡುವಳಿ ಅನುಸಾರ ಯಾವುದು ಕಡಿಮೆಯೋ ಆವಿಸ್ತೀರ್ಣದ ಅನುಗುಣವಾಗಿ ಸೀಮಿತಗೊಳಿಸಿ ವಿತರಿಸಲಾಗುವುದು. ಬಾರಕೋಡ್ ಹೊಂದಿರುವ ಬಿತ್ತನೆ ಬೀಜದ ಪ್ಯಾಕೇಟ್‌ಳನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕೆ ಕಿಸಾನ್ ತಂತ್ರಾಂಶದ ಮೂಲಕವೇ ಬೀಜ ವಿತರಿಸುವುದು ಕಡ್ಡಾಯವಾಗಿರುವುದರಿಂದ ರೈತರು ಸಹಕರಿಸುವಂತೆ ಸಹಾಯಕ ನಿರ್ದೇಶಕರು ಕೋರಿದರು.
1,663 ಮೆಟ್ರಿಕ್ ಟನ್ ಯೂರಿಯಾ
ತಾಲೂಕಿನಲ್ಲಿ ಯೂರಿಯಾ 1,663 ಮೆಟ್ರಿಕ್ ಟನ್, ಡಿ.ಎ.ಪಿ-789 ಮೆ. ಟನ್, ಎಂ.ಒ.ಪಿ-130,ಮೆ. ಟನ್, ಎನ್.ಪಿ.ಕೆ-2,688 ಮೆ. ಟನ್, ಮತ್ತು ಎಸ್.ಎಸ್.ಪಿ-138 ಮೆ. ಟನ್‌ನಷ್ಟು ರಸಗೊಬ್ಬರ ದಾಸ್ತಾನು ಇದೆ. ರೈತರು ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇತರೆ ಕಾಂಪ್ಲೆಕ್ಸ್ ರಸಗೊಬ್ಬರಗಳಾದ 20:20:0:13 ,17:17:17, 10:26:26, 15:15:15, ಗಳನ್ನು ಬಳಸಬಹುದಾಗಿದೆ. ಮುಂದುವರೆದು ಜೈವಿಕ ಗೊಬ್ಬರಗಳು ಸಾವಯವ ಗೊಬ್ಬರಗಳು, ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೆಟ್, ಬೋರಾನ್ ಹಾಗೂ ಶೇಕಡಾ 100ರಷ್ಟು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಬಳಸಬಹುದಾಗಿದೆ ಎಂದು ವೀರಭದ್ರಪ್ಪ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net