ಅಧಿಕ ಮಾಸ, ಆಂಜನೇಯ ದರ್ಶನಕ್ಕೆ ಜನಸಾಗರ; ಕಾಂತೇಶ, ಶಾಂತೇಶ, ಭ್ರಾಂತೇಶನ ಕಂಡು ಪುನೀತರಾದ ಭಕ್ತಸಾಗರ; ಒಂದೇ ದಿನ ಮೂರು ದೇವರ ಕಂಡರೆ ಕಾಶಿ ಫಲ

Haveri, Adhika Masa, Kantesham Shantesha, Brantesha, Anjaneya, Temple,
Haveri, Adhika Masa, Kantesham Shantesha, Brantesha, Anjaneya, Temple,
Published on
ಹಾವೇರಿ: ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸದ ಸಂದರ್ಭದಲ್ಲಿ ಕಾಂತೇಶ, ಶಾಂತೇಶ ಹಾಗೂ ಭ್ರಾಂತೇಶನ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಜೂ.15ರಂದು ಅಮಾವಾಸ್ಯೆಗೆ ಅಧಿಕ ಮಾಸ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ, ಸೋಮವಾರ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಅಧಿಕ ಮಾಸದ ಸಂದರ್ಭದಲ್ಲಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯ ಕಾಂತೇಶ (ಆಂಜನೇಯ), ಹಿರೇಕೆರೂರ ತಾಲೂಕಿನ ಶಾಂತೇಶ (ಮಾರುತಿ) ಹಾಗೂ ಪಕ್ಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ (ಹುಚ್ಚರಾಯಸ್ವಾಮಿ) ದೇವರ ದರ್ಶನಕ್ಕೆ ಭಾರೀ ಬೇಡಿಕೆ ಇರುತ್ತದೆ. ಆಂಜನೇಯ ಸ್ವರೂಪಿ ಮೂರು ದೇವರನ್ನು ಒಂದೇ ದಿವಸ ಸೂರ್ಯೋದಯದಿಂದ ಸೂರ್ಯಾಸ್ತದ ಒಳಗೆ ದರ್ಶನ ಮಾಡಿದರೆ ಕಾಶಿ ವಿಶ್ವನಾಥನ ದರ್ಶನ ಮಾಡಿದಷ್ಟೇ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ, ಪಾಪ ತೊಳೆಯುತ್ತದೆ. ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಭಕ್ತರಲ್ಲಿ ಇದೆ. ಇದೇ ಕಾರಣದಿಂದ ಅಧಿಕ ಮಾಸದ ಆರಂಭದಿಂದ ಕೊನೆಯವರೆಗೆ ಲಕ್ಷಾಂತರ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಜಿಲ್ಲೆ ಮಾತ್ರವಲ್ಲ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಕುಟುಂಬಸಮೇತರಾಗಿ ಬಂದು ಮೂರು ದೇವರ ದರ್ಶನ ಮಾಡುತ್ತಾರೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳ ಭಕ್ತರೂ ಅಧಿಕ ಮಾಸದ ವೇಳೆ ಮೂರು ದೇವರ ಆಶೀರ್ವಾದ ಪಡೆಯಲು ಆಗಮಿಸುತ್ತಾರೆ.
ಶಕ್ತಿಯುತ ಸಾಲಿಗ್ರಾಮ ರೂಪಿ ಹನುಮ
ಕದರಮಂಡಲಗಿಯ ಕಾಂತೇಶ ದೇವರ ಮುಖ ನೇರವಾಗಿದ್ದು, ಕಣ್ಣುಗಳು ಸೂರ್ಯ ಸಾಲಿಗ್ರಾಮದಿಂದ ಮಾಡಲ್ಪಟ್ಟಿವೆ. ಈ ದೇವರ ವಿಗ್ರಹ ಸದಾ ಕಾಂತಿಯುತವಾಗಿ ಹೊಳೆಯುತ್ತದೆ. ಹಾಗಾಗಿ, ಕಾಂತೇಶ ಎನ್ನಲಾಗುತ್ತದೆ. ಸಾತೇಶನಹಳ್ಳಿಯ ಶಾಂತೇಶ ದೇವರ ವಿಗ್ರಹದ ತಲೆಯಲ್ಲಿ ಸಾಲಿಗ್ರಾಮ ಇದೆ. ವ್ಯಾಸರಾಯರು ಸ್ಥಾಪನೆ ಮಾಡಿದ್ದರು ಎನ್ನಲಾಗಿದೆ. ಮಕ್ಕಳಾಗದವರಿಗೆ ದಸರಾ ಸಂದರ್ಭದಲ್ಲಿ ದೇಗುಲದ ವತಿಯಿಂದ ಔಷಧ ಕೊಡಲಾಗುತ್ತದೆ. ಶಾಂತೇಶ ಮಕ್ಕಳ ಫಲ ಕೊಡುತ್ತಾನೆ ಎಂಬ ನಂಬಿಕೆಯಿಂದ ಔಷಧಕ್ಕಾಗಿ ಸಾವಿರಾರು ದಂಪತಿ ಆಗಮಿಸುತ್ತಾರೆ. ಶಿಕಾರಿಪುರದ ಭ್ರಾಂತೇಶ ದೇವರ ನಾಸಿಕ(ಮೂಗು)ದ ಮೇಲೆ ಸಾಲಿಗ್ರಾಮ ಇದ್ದು, ಇದರ ದರ್ಶನದಿಂದ ಪುಣ್ಯ ಲಭಿಸುತ್ತದೆ. ಮರಾಠ ದೊರೆ ದೋಂಡಿಯಾ ವಾಘ ಶತ್ರುಗಳಿಂದ ರಕ್ಷಣೆ ಕೋರಿ ಇಲ್ಲಿಗೆ ಬಂದು ಪ್ರಾರ್ಥಿಸುತ್ತಾನೆ. ರಕ್ಷಣೆಗೆ ಒಳಪಟ್ಟ ನಂತರ ದೇವರಿಗೆ ವಿಶೇಷ ಕತ್ತಿ ಅರ್ಪಿಸಿರುತ್ತಾನೆ. ಈ ಕತ್ತಿ ಇಂದಿಗೂ ದೇಗುಲದಲ್ಲಿದೆ.
ಶನಿವಾರ, ಭಾನುವಾರ ಜನದಟ್ಟಣೆ ಹೆಚ್ಚಳ
ಅಧಿಕ ಮಾಸದ ಕಾಂತೇಶ, ಶಾಂತೇಶ ಹಾಗೂ ಭ್ರಾಂತೇಶ ದೇವರ ದರ್ಶನ ಜೂ.15ರ ಅಧಿಕ ಮಣ್ಣೆತ್ತಿನ ಅಮಾವಾಸ್ಯೆವರೆಗೆ ಮುಂದುವರಿಯಲಿದೆ. ಹಾಗಾಗಿ, ಜೂ.13ರಂದು ಶನಿವಾರ, ಜೂ.14ರಂದು ಭಾನುವಾರ ಹಾಗೂ ಸೋಮವಾರ ಮೂರು ದೇಗುಲಗಳಲ್ಲಿ ಭಾರೀ ಜನಸಂದಣಿ ಕಂಡುಬರುವ ಸಾಧ್ಯತೆ ಇದೆ ಎಂದು ಭಕ್ತರೊಬ್ಬರು ಹೇಳಿದರು. ಈ ವೇಳೆ ಸಂಚಾರ ದಟ್ಟಣೆ, ವಾಹನ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಜಿಲ್ಲಾ ಪೊಲೀಸರು, ಸ್ಥಳೀಯ ಗ್ರಾಮ ಪಂಚಾಯಿತಿಯವರು, ದೇವಸ್ಥಾನ ಸಮಿತಿಯವರು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿದೆ.
"

ಕಳೆದ ವರ್ಷಕ್ಕಿಂತ ಈ ವರ್ಷ ಭಕ್ತರ ಸಂಕ್ಯೆ ಹೆಚ್ಚಳವಾಗಿದೆ. ಅಧಿಕ ಮಾಸದ ಅಮಾವಾಸ್ಯೆವರೆಗೆ ದೇವರ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಭಕ್ತರಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರೂ ಸಹ ಶಾಂತಿಯುತವಾಗಿ ದೇವರ ದರ್ಶನ ಪಡೆದು ಸಹಕರಿಸಬೇಕು.

— ಹನುಮಂತಪ್ಪ ಕುಡಪಲಿ, ಅಧ್ಯಕ್ಷ, ಪಂಚ ಕಮಿಟಿ, ಶ್ರೀ ಆಂಜನೇಯ (ಕಾಂತೇಶ) ದೇವಸ್ಥಾನ ಸಮಿತಿ, ಕದರಮಂಡಲಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net