ಸರ್ಕಾರಿ ಉದ್ಯೋಗ ನೇಮಕಾತಿಗೆ ಎಬಿವಿಪಿ ಆಗ್ರಹ; ಹಾವೇರಿಯ ವಾಲ್ಮೀಕಿ ವೃತ್ತದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

 abvp, protest, for govt jobs,
abvp, protest, for govt jobs,
Published on
ಹಾವೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾವೇರಿ ನಗರ ಶಾಖೆ ವತಿಯಿಂದ ರಾಜ್ಯದಲ್ಲಿ ಶಿಕ್ಷಣ ಬಿಕ್ಕಟ್ಟು ಬಗೆಹರಿಸುವುದು ಮತ್ತು ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ನಗರ ಕಾರ್ಯದರ್ಶಿ ಸಾಗರ ಪೋಲಿಸಗೌಡ್ರ ಮಾತನಾಡಿ, ಶಿಕ್ಷಣಕ್ಕೆ ಹೆಸರುವಾಸಿ ಆಗಿರುವ ರಾಜ್ಯದ ವಿವಿಧ ಸರ್ಕಾರಿ ಅನುದಾನಿತ ಕಾಲೇಜ್‌ಗಳಲ್ಲಿ ನಕಲಿ ಪಿಎಚ್‌ಡಿ ಪದವಿಗಳನ್ನು ಹೊಂದಿರುವ ವ್ಯಕ್ತಿಗಳು ಅತಿಥಿ ಉಪನ್ಯಾಸಕರಾಗಿ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ದಾಖಲೆಗಳು ನಕಲಿ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಘಟನೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯನ್ನು ಮಾಡುವುದಷ್ಟೇ ಅಲ್ಲದೆ ಶಿಕ್ಷಣದ ಗುಣಮಟ್ಟಕ್ಕೂ ಕಳಂಕ ತರುವಂತಹ ಸಂಗತಿಯಾಗಿದೆ ಎಂದರು.
ಉದಾಹರಣೆಗೆ ಹೇಳುವುದಾದರೆ ರಾಜ್ಯದ ಅನೇಕ ಭಾಗಗಳಲ್ಲಿ ಜಮಖಂಡಿ, ಹಾವೇರಿ, ಯಾದಗಿರಿ, ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ನಕಲಿ ಪಿಎಚ್‌ಡಿ ಪದವಿ ಹೊಂದಿದ ವ್ಯಕ್ತಿಗಳು ಕಾನೂನಿನ ಭಯದಿಂದ ರಾಜೀನಾಮೆ ನೀಡಿ ಪಾರಾಗುತ್ತಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮಗಳು ಜರುಗಿಸದೇ ಇರುವುದನ್ನು ಎಬಿವಿಪಿ ಖಂಡಿಸುತ್ತದೆ. ಇದರಿಂದ ಅರ್ಹರಿಗೆ ಅನ್ಯಾಯ ಆಗುತ್ತಿದೆ. ನಕಲಿ ಪಿಎಚ್‌ಡಿ ಜಾಲವನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು. ಶಿಸ್ತುಕ್ರಮ ಜರುಗಿಸಬೇಕು ಆಗ್ರಹಿಸಿದರು.
ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರಿ ಕಾಲೇಜ್‌ಗಳು ಸೇರಿದಂತೆ ಹಲವು ಕಾಲೇಜ್‌ಗಳಲ್ಲಿ ಅಧ್ಯಾಪಕರು, ಶಿಕ್ಷಕರು, ಇತರ ಹುದ್ದೆಗಳು ಖಾಲಿ ಇದ್ದು ಇದರಿಂದ ತರಗತಿಗಳು ಸರಿಯಾದ ಸಮಯಕ್ಕೆ ನಡೆಯದೇ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಠ್ಯಕ್ರಮಗಳು ಸರಿಯಾದ ಸಮಯಕ್ಕೆ ಮುಗಿಯದೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದೊಡ್ಡ ಹೊಡೆತ ಬೀಳುವಂತಾಗಿದೆ. ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ 9,292 ಬೋಧಕ, ಬೋಧಕೇತರ ಹುದ್ದೆಗಳು ಹಾಗೂ ಐದು ಉಪಕುಲಪತಿಗಳ ಹುದ್ದೆಗಳು ಭರ್ತಿ ಆಗದೇ ಇರುವುದು ಹಾಗೂ ಹಿಂದಿನ ಸರ್ಕಾರದ ಒಂದು ಆಡಳಿತದ ಅವಧಿಯಲ್ಲಿ ಸ್ಥಾಪನೆಗೊಂಡಿರುವ ಹೊಸ ಸಪ್ತ ವಿಶ್ವವಿದ್ಯಾಲಯಗಳು ಅನುದಾನದ ಕೊರತೆಯಿಂದ ಬಳಲುತ್ತಿದ್ದು, ವಿಶ್ವವಿದ್ಯಾಲಯಗಳು ಅರಕ್ಕೇರದೇ ಮೂರಕ್ಕೆ ಇಳಿಯದ ಪರಿಸ್ಥಿತಿಯಲ್ಲಿವೆ.
ಅಲ್ಲದೆ ಹೊಸ ವಿಶ್ವವಿದ್ಯಾಲಯಗಳಲ್ಲಿ ಹೊಸದಾಗಿ ನೇಮಕಾತಿ ಆಗದೇ ಇರುವುದರಿಂದ ತಾತ್ಕಾಲಿಕ ಸಿಬ್ಬಂದಿಯಿಂದಲೇ ವಿಶ್ವವಿದ್ಯಾಲಯದ ಕಾರ್ಯವೈಖರಿಗಳು ಹಾಗೂ ತರಗತಿಗಳು ನಡೆಯುತ್ತಿವೆ. ಈ ಸಂಗತಿಗಳು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಹಾಗೂ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಿಗೆ ಸರಿಯಾದ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಬೇಕು. ವಿಶ್ವವಿದ್ಯಾಲಯಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ, ಕಾಲೇಜ್‌ಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಅಧ್ಯಾಪಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಈಶ್ವರಿ ಬಡಿಗೇರ, ಕಾರ್ತಿಕ ಕಲಾಲ, ರೋಹಿತ ಹಿರೇಮಠ, ಚಂದನ ಅಸುಂಡಿ, ಐಶ್ವರ್ಯ ಆರ್.ಡಿ., ಚಂದನ ಎಂ.ಕೆ., ಆದಿತ್ಯ ಲಮಾಣಿ,, ಪ್ರಜ್ವಲ ಕಟ್ಟಿಮನಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net