

ಹಾನಗಲ್ಲ: ಮಠದ ಆಸ್ತಿ ಮಾರಾಟ ಮಾಡಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಡಿ ಹುಬ್ಬಳ್ಳಿ ಮೂರು ಸಾವಿರ ಮಠದ ಗುರು ಸಿದ್ಧರಾಜಯೋಗೀಂದ್ರ ಸ್ವಾಮೀಜಿ (ಹಾನಗಲ್ಲ ಕುಮಾರೇಶ್ವರ ಮಠದ ಪೀಠಾಧಿಪತಿ ಕುಮಾರ ಸ್ವಾಮೀಜಿ) ವಿರುದ್ಧ ಇಲ್ಲಿಯ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಚಿಕ್ಕೇರಿ-ಹೊಸಳ್ಳಿ ಗ್ರಾಮದ ರವೀಂದ್ರ ಶಿವಮೂರ್ತೇಪ್ಪ ಚಿಕ್ಕೇರಿ (50) ಎಂಬುವರು ದೂರು ನೀಡಿದ್ದಾರೆ.
ದೂರಿನಲ್ಲಿದೆ...?
ಹಾನಗಲ್ಲ ಪಟ್ಟಣದ ವೀರಶೈವ ವಿರಕ್ತಮಠಕ್ಕೆ ಸಂಬಂಧಿಸಿದ ಆಸ್ತಿಗಳು ಹಳೇ ಕೋಟೆ, ಪುರಸಭೆ ಹಾಗೂ ಬೆಳಗಾಳಪೇಟೆ ಗ್ರಾಪಂ ವ್ಯಾಪ್ತಿಯಲ್ಲಿವೆ. ಈ ಮಠಕ್ಕೆ 1985ರಲ್ಲಿ ಕುಮಾರ ಸ್ವಾಮೀಜಿ (ಈಗಿನ ಹುಬ್ಬಳ್ಳಿ ಮೂರು ಸಾವಿರ ಮಠದ ಗುರು ಸಿದ್ಧರಾಜಯೋಗೀಂದ್ರ ಸ್ವಾಮೀಜಿ) ಅವರನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡಲಾಗಿತ್ತು. ಇವರಿಗೆ ಮಠದ ಆಸ್ತಿಗಳನ್ನು ನೋಡಿಕೊಳ್ಳುವ ಅಧಿಕಾರ ಮಾತ್ರವಿದೆ.
ಆದರೆ, ಸ್ವಾಮೀಜಿ ಮಠಕ್ಕೆ ಸಂಬಂಧಿಸಿದ ಬೆಳಗಾಲಪೇಟೆ ಗ್ರಾಮದಲ್ಲಿರುವ 2.38 ಎಕರೆ ಜಮೀನನ್ನು ಗಂಗಾಧರ ಹುಗ್ಗಿಶೆಟ್ಟರ್ ಎಂಬುವರಿಗೆ 4 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಪಟ್ಟಣದ ಪುರಸಭೆ ವ್ಯಾಪ್ತಿಯ ಸರ್ವೇ ನಂ. 3689/23 ಮತ್ತು 3690ರ ಆಸ್ತಿಯನ್ನು ಕುಮಾರೇಶ್ವರ ಪತ್ತಿನ ಸಹಕಾರ ಸಂಘಕ್ಕೆ 12.08 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ.
ಇದೇ ರೀತಿ ಬೇರೆ ಬೇರೆ ಆಸ್ತಿಗಳನ್ನು ಮಾರಾಟ ಮಾಡಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿದ್ದಾರೆ. ಇದರ ಜತೆಗೆ ಭಕ್ತರಿಂದ ಬಂದ ಕಾಣಿಕೆ ಹಣ ಹಾಗೂ ದೇಣಿಗೆ ರೂಪದಲ್ಲಿ ಬಂದ ಬೆಲೆ ಬಾಳುವ ವಸ್ತುಗಳನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.