Gurupoornime: ಪುಣ್ಯಾಶ್ರಮ ಅಭಿವೃದ್ಧಿಯಲ್ಲಿ ಭಕ್ತರ ಸಹಕಾರ ಅಮೂಲ್ಯ

ಹಿರೇಕೆರೂರ ತಾಲೂಕಿನ ಸಮೀಪದ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಗುರು ಪೂರ್ಣಿಮೆ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಶ್ರಾವಣ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆ ಮಾಡಿದರು. ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಚನ್ನವೀರ ಸ್ವಾಮೀಜಿ, ಲಲಿತಾ ಪಾಟೀಲ, ಪ್ರಕಾಶಗೌಡ ಗೌಡರ ಇದ್ದರು.
ಹಿರೇಕೆರೂರ ತಾಲೂಕಿನ ಸಮೀಪದ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಗುರು ಪೂರ್ಣಿಮೆ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಶ್ರಾವಣ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆ ಮಾಡಿದರು. ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಚನ್ನವೀರ ಸ್ವಾಮೀಜಿ, ಲಲಿತಾ ಪಾಟೀಲ, ಪ್ರಕಾಶಗೌಡ ಗೌಡರ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಹಿರೇಕೆರೂರ
ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ಪರಿಶ್ರಮದ ಫಲವಾಗಿ ಈ ಕ್ಷೇತ್ರ ಅಭಿವೃದ್ಧಿ ಹೊಂದಿದೆ. ಶ್ರೀಗಳ ಶ್ರಮಕ್ಕೆ ಭಕ್ತರು ನೀಡುತ್ತಿರುವ ಸಹಕಾರವೂ ಅಮೂಲ್ಯವಾದದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಸಮೀಪದ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಧರ್ಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಜಗದ್ಗುರು ರಂಭಾಪುರಿ ಪೀಠದ ಶಾಖಾ ಮಠವಾಗಿರುವ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮ ಜನವಸತಿಯಿಂದ ದೂರವಾಗಿದ್ದರೂ, ಇಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಯಾರಿಗಾದರೂ ಅಚ್ಚರಿ ಮತ್ತು ಸಂತಸ ಉಂಟು ಮಾಡುತ್ತದೆ ಎಂದರು.
ಶ್ರೀಮಠದ ಪೀಠಾಧ್ಯಕ್ಷ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶ ಧರ್ಮ ಸೂತ್ರಗಳು ಎಲ್ಲರ ಶ್ರೇಯೋಭಿವೃದ್ಧಿಗೆ ಕಾರಣವಾಗಿವೆ. ಜನರಲ್ಲಿ ಎಷ್ಟು ಪ್ರಮಾಣದಲ್ಲಿ ಧಾರ್ಮಿಕ ಭಾವನೆ ಮತ್ತು ಆಚರಣೆ ಬೆಳೆದು ಬರುತ್ತವೆಯೋ, ಅಷ್ಟು ಸಾಮರಸ್ಯ ಸದ್ಭಾವನೆ ಸಮಾಜದಲ್ಲಿ ಬೆಳೆದು ಬರುತ್ತವೆ. ಶ್ರೀಮದ್ ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದದಿಂದಾಗಿ ನಾವು ಊಹಿಸದ ಅಭಿವೃದ್ಧಿ ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬದವರ ನೆರವು ಹಾಗೂ ಭಕ್ತಾದಿಗಳ ಸಹಕಾರ ದೊಡ್ಡದು ಎಂದರು.
ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಅರಕೆರೆಯ ಚನ್ನವೀರ ಸ್ವಾಮೀಜಿ, ಸಮಾಜ ಸೇವಕ ಪ್ರಕಾಶಗೌಡ ಗೌಡರ ಮಾತನಾಡಿದರು. ಈ ಸಂದರ್ಭದಲ್ಲಿ ಬಿ.ವೈ. ವಿಜಯೇಂದ್ರ ಅವರು, ಶ್ರೀ ಜಗದ್ಗುರು ರೇಣುಕಾಚಾರ್ಯ ಹರಕೆ ರಥದ ಮನೆ ಉದ್ಘಾಟನೆ ಮಾಡಿ ಕಡೇನಂದಿಹಳ್ಳಿ ಶ್ರೀಗಳು ಧರ್ಮ ಜಾಗೃತಿ ಮತ್ತು ಲೋಕ ಕಲ್ಯಾಣಕ್ಕಾಗಿ ಸಂಕಲ್ಪಿಸಿರುವ ಶ್ರಾವಣ ಶಿವಪೂಜಾ ತಪೋನುಷ್ಠಾನ ಕಾರ್ಯಕ್ರಮದ ಮಾಹಿತಿ ಪತ್ರಿಕೆ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಲಾಮಂಟಪ ಮತ್ತು ಶ್ರೀಮಠದ ಸುತ್ತ ಕೋಟೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶಿಕಾರಿಪುರ, ಹಿರೇಕೆರೂರು, ಸೊರಬ, ಶಿರಸಿ, ಸಿದ್ದಾಪುರ, ಹಾನಗಲ್, ಹಾವೇರಿ ಭದ್ರಾವತಿ ತಾಲೂಕುಗಳ ಸುಮಾರು 30 ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಮಠದ ಎಲ್ಲ ಪುರೋಹಿತ ಬಳಗದವರಿಂದ ಕ್ಷೇತ್ರದ ದೈವಗಳಿಗೆ ರುದ್ರಾಭಿಷೇಕ ನೆರವೇರಿಸಿ, ವಿಶೇಷ ಫಲಾಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ರಾಣೆಬೆನ್ನೂರಿನ ಶ್ರೀ ಕನಕಪರಮೇಶ್ವರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಲಲಿತಾ ಪಾಟೀಲ ನೇತೃತ್ವದಲ್ಲಿ ಶ್ರೀಮಠಕ್ಕೆ ಆಗಮಿಸಿದ ಭಕ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ, ನ್ಯಾಚುರಲ್ ಹೀಲಿಂಗ್ ಹಾಗೂ ಬಸವ ಅಕ್ಯೂ ಅಕಾಡೆಮಿ ಬೆಂಗಳೂರು-ದಾವಣಗೆರೆ ವ್ಯಾಪ್ತಿಯ ವೈದ್ಯರಿಂದ ಉಚಿತ ಸೀಡ್ ಮತ್ತು ಕಲರ್ ಥೆರಪಿ ಹಾಗೂ ಅಕ್ಯೂಪ್ರೆಶರ್ ಚಿಕಿತ್ಸೆ ನಡೆಯಿತು. ಸಂಜೆ ಜಗದ್ಗುರು ರೇಣುಕಾಚಾರ್ಯರ ಹರಕೆ ರಥೋತ್ಸವ ನಂತರ ಶ್ರೀಗಳವರ ಸಾಮೂಹಿಕ ಪಾದ ಪೂಜೆ ನಡೆಯಿತು. ಆಗಮಿಸಿದ ಭಕ್ತಾಧಿಗಳಿಗೆ ಅನ್ನಪ್ರಸಾದ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net