

ರಾಣೆಬೆನ್ನೂರು: ಗುರುಗಳು ಮಕ್ಕಳನ್ನು ಜ್ಞಾನ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು. ಜ್ಞಾನದ ದಾರಿ ತೋರಿಸುವವನು. ಹೊಸ ವಿಷಯಗಳನ್ನು ಕಲಿಸುವವರು, ಅನುಮಾನಗಳನ್ನು ನಿವಾರಿಸುವವರು, ಜ್ಞಾನವನ್ನು ವಿಸ್ತರಿಸುವವರೇ ಬದುಕಿನ ನಿಜವಾದ ಗುರುಗಳಾಗಿದ್ದಾರೆ ಎಂದು ಭದ್ರಾವತಿಯ ಅರಕೆರೆ ಸಿದ್ದಲಿಂಗ ಶಿವಯೋಗಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಗುರು ಕೊಟ್ಟೂರೇಶ್ವರ ಮಠದಲ್ಲಿ ಏರ್ಪಡಿಸಿದ್ದ ಗುರು ರ್ಪೂಣಿಮೋತ್ಸವ, ಸನ್ಮಾನಿತರಿಗೆ ಗೌರವಾರ್ಪಣೆ, ಶ್ರೀಗಳ ತುಲಾಭಾರ, ರಕ್ತದಾನ ಶಿಬಿರ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. ವ್ಯಕ್ತಿಯ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡಿ, ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುವ ಗುರುಗಳನ್ನು ಸ್ಮರಿಸುವ ದಿನವೇ ಗುರು ರ್ಪೂಣಿಮೆ ಎಂದರು.
ಗುರು ರ್ಪೂಣಿಮೆ ಕೇವಲ ಧಾಮಿರ್ಕ ಆಚರಣೆಗೆ ಸೀಮಿತವಾಗದೆ, ಜೀವನದಲ್ಲಿ ದಾರಿ ತೋರಿದ ಗುರುಗಳನ್ನು ಸ್ಮರಿಸುವ ಹಾಗೂ ಅವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ. ತಾಯಿ-ತಂದೆಯರ ನಂತರ ಜೀವನಕ್ಕೆ ಜ್ಞಾನ, ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳನ್ನು ಕಲಿಸುವ ಗುರುವಿಗೆ ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ ಎಂದು ತಿಳಿಸಿದರು.
ಶಿಗ್ಗಾಂವ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 20ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.
ಪ್ರಮುಖರಾದ ಪರಮೇಶ ಯಡಿಯಾಪುರ, ಸತೀಶ ಅಜ್ಜೋಡಿಮಠ, ಪ್ರಭು ಹಂಸಸಾಗರ, ವಿಶ್ವನಾಥ ಕೋಡದ, ಮಹೇಶ ಶೆಟ್ಟರ, ಬಸವರಾಜ ಹುಚ್ಚಗೊಂಡರ, ಬಿದ್ದಾಡೆಪ್ಪ ಚಕ್ರಸಾಲಿ, ಮಹೇಶ ಶಿವಮೊಗ್ಗಿ, ಜಗದೀಶ ಕಳ್ಯಾಳ, ಶಾಂತಯ್ಯ ಶಾಸ್ತ್ರೀಗಳು ಮತ್ತಿತರರಿದ್ದರು.