ನೌಕರಿ ಕೊಡಿಸುವ ನೆಪದಲ್ಲಿ 43.25 ಲಕ್ಷ ರೂ. ವಂಚನೆ

Crime
Crime
Published on

ಹಾವೇರಿ: ತಾವು ಡಿವೈಎಸ್ಪಿ ಎಂದು ಹೇಳಿಕೊಂಡು ನೌಕರಿ ಕೊಡಿಸುವ ನೆಪದಲ್ಲಿ 43.25 ಲಕ್ಷ ರೂ. ವಂಚಿಸಿದ ಬೆಂಗಳೂರಿನ ವ್ಯಕ್ತಿಯೊಬ್ಬನ ವಿರುದ್ಧ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಹುಣಸೆಮಾರಣಹಳ್ಳಿ ರಾಜೇಶ್ವರಿ ನಗರದ ಗ್ಯಾನನಗೌಡ ಸಿದ್ದನಗೌಡ ಪಾಟೀಲ (46) ಎಂಬುವನ ವಿರುದ್ಧ ದೂರು ದಾಖಲಾಗಿರುವುದು.

ಈತನ ವಿರುದ್ಧ ಇಲ್ಲಿಯ ಶಿವಯೋಗಿಶ್ವರ ನಗರದ ನಿಂಗಪ್ಪ ಮುದ್ದಣ್ಣನವರ ಎಂಬುವರು ದೂರು ನೀಡಿದ್ದಾರೆ. ಆರೋಪಿಯು ನನ್ನನ್ನು ಪರಿಚಯ ಮಾಡಿಕೊಂಡು ತಾನು ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಇರುವುದಾಗಿ ಹೇಳಿದ್ದ. ನನ್ನ ಮಗನಿಗೆ ನೌಕರಿ ಕೊಡಿಸುವುದಾಗಿ ನಂಬಿಸಿ 3.75 ಲಕ್ಷ ರೂ. ತೆಗೆದುಕೊಂಡಿದ್ದಾನೆ. ಅಲ್ಲದೆ ಇನ್ನೂ 10 ಜನರಿಂದ 39.50 ಲಕ್ಷ ರೂ. ಸೇರಿ ಒಟ್ಟು 43.25 ಲಕ್ಷ ರೂ. ಹಣ ತೆಗೆದುಕೊಂಡಿದ್ದಾನೆ. ಆದರೆ, ಈತ ಹಣ ಪಡೆದುಕೊಂಡು ಈವರೆಗೂ ನೌಕರಿ ಕೊಡಿಸದ ದ್ರೋಹ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net