ದೇಶದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿಯಾದ ಇಲ್ಲಿಯ ಮಾರುಕಟ್ಟೆಯಲ್ಲಿ ಶುಭ ಶುಕ್ರವಾರ ಟೆಂಡರ್‌ನಲ್ಲಿ ಡಬ್ಬಿ ತಳಿಗೆ 70 ಸಾವಿರ ರೂ. ಹಾಗೂ ಕಡ್ಡಿಗೆ 64 ಸಾವಿರ ರೂ. ಗರಿಷ್ಠ ಬೆಲೆ ಲಭಿಸಿ, ಈ ವರ್ಷ ಭರ್ಜರಿ ವ್ಯಾಪಾರದ ಮುನ್ಸೂಚನೆ ನೀಡಿದೆ.
ಎರಡು ವರ್ಷಗಳಿಂದ ಬ್ಯಾಡಗಿ ಗುಣಮಟ್ಟದ ಮೆಣಸಿನಕಾಯಿ ಕ್ವಿಂಟಾಲ್‌ಗೆ 40ರಿಂದ 70ಸಾವಿರ ರೂ.ಗಳವರೆಗೂ ಬೆಲೆ ಲಭಿಸಿದ್ದು, ಮಳೆಗಾಲದಲ್ಲಿಯೂ ಡಬ್ಬಿ ತಳಿ 70 ಸಾವಿರ ರೂ. ದಾಟಿರುವುದು ಅಚ್ಚರಿ ಮೂಡಿಸಿದೆ. ಇದರೊಂದಿಗೆ ಕಡ್ಡಿ ತಳಿ ಕೂಡ 64 ಸಾವಿರ ಗರಿಷ್ಠ ಬೆಲೆ ಮಾರಾಟವಾಗಿ ಗಮನ ಸೆಳೆದಿದೆ.
ಅಕ್ಟೋಬರ್‌ನಿಂದ ಆರಂಭವಾಗುವ ಮೆಣಸಿನಕಾಯಿ ಮಾರುಕಟ್ಟೆ ಏಪ್ರಿಲ್‌ವರೆಗೂ ಭರ್ಜರಿಯಾಗಿ ವ್ಯಾಪಾರ ನಡೆಸಲಿದೆ. ಬಳಿಕ ಮಳೆಗಾಲದಲ್ಲಿಯೂ ವಾರದ ಸೋಮವಾರ ಹಾಗೂ ಗುರುವಾರ ಆನ್‌ಲೈನ್ ಟೆಂಡರ್ ಮೂಲಕ ವ್ಯಾಪಾರ ನಡೆಯಲಿದೆ. ಶ್ರಾವಣ ಮಾಸದ ಶುಕ್ರವಾರವೂ ಟೆಂಡರ್ ನಡೆದಿದ್ದು, ರೈತರು ಹಾಗೂ ವ್ಯಾಪಾರಸ್ಥರಲ್ಲಿ ದರ ಹೆಚ್ಚಳದಿಂದ ಸಂತಸ ಮೂಡಿದೆ.
ಬ್ಯಾಡಗಿ ಡಬ್ಬಿ ತಳಿಯ 60 ಚೀಲಗಳಿಗೆ ಕ್ವಿಂಟಾಲ್‌ಗೆ 70 ಸಾವಿರ ರೂ. ಗರಿಷ್ಠ ಬೆಲೆ ಲಭಿಸಿದ್ದು, ಉಳಿದ ಚೀಲಗಳಿಗೆ 6 ರಿಂದ 70 ಸಾವಿರ ರೂ. ದರವಿದ್ದು, ಸರಾಸರಿ 55 ಸಾವಿರವಿದೆ.
ಬ್ಯಾಡಗಿ ಕಡ್ಡಿಕಾಯಿ ತಳಿಯ 80 ಚೀಲಗಳು ಕ್ವಿಂಟಾಲ್‌ಗೆ 64 ಸಾವಿರ ರೂ.ಗಳಿಗೆ ಮಾರಾಟವಾಗಿದ್ದು, ಉಳಿದ ಚೀಲಗಳು 5ರಿಂದ 64 ಸಾವಿರ ರೂ.ಗಳವರೆಗೆ ವ್ಯಾಪಾರ ನಡೆದಿದ್ದು, ಸರಾಸರಿ 52 ಸಾವಿರ ರೂ. ತಲುಪಿದೆ. ಶುಕ್ರವಾರದ ಟೆಂಡರ್‌ನಲ್ಲಿ 8800 ಚೀಲಗಳು ದಲ್ಲಾಳಿಗಳ ಅಂಗಡಿಗಳಲ್ಲಿ ಖರೀದಿಯಾಗಿವೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಈ ಬಾರಿ ಹಂಗಾಮಿನಲ್ಲಿ ಮೆಣಸಿನಕಾಯಿ ಕೊರತೆ ಎದುರಾಗುವ ಮಾತು ಕೇಳಿಬಂದಿತ್ತು. ಕಳೆದೊಂದು ತಿಂಗಳಿಂದ ಅಲ್ಲಲ್ಲಿ ಮಳೆ ಬೀಳುತ್ತಿರುವ ಹಾಗೂ ಡ್ಯಾಂಗಳಲ್ಲಿ ನೀರು ಸಂಗ್ರಹವಾಗುತ್ತಿದ್ದಂತೆ ಮೆಣಸಿನಕಾಯಿ ಬೆಳೆಯುವಲ್ಲಿ ರೈತರು ಮುಂದಾಗಿದ್ದಾರೆ. ಮಳೆಗಾಲದಲ್ಲಿ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿದ್ದ ಚೀಲಗಳನ್ನು ಹೊರತೆಗೆದು ವ್ಯಾಪಾರ ಮಾಡಲಾಗುತ್ತಿದೆ.