ಗ್ಯಾಸ್ ಏಜೆನ್ಸಿಯಲ್ಲಿ ಗಲಾಟೆ, ಇಬ್ಬರಿಗೆ ಗಾಯ

Crime
Crime
Published on

ಹಾವೇರಿ: ಇಲ್ಲಿಯ ಹುಕ್ಕೇರಿಮಠದ ಎದುರಿನ ಮಾಗಾವಿ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಗಲಾಟೆ ನಡೆದಿದ್ದು, ವ್ಯವಸ್ಥಾಪಕ ಅಲೀಂ ಹಾಗೂ ಗ್ರಾಹಕ ಮಾಲತೇಶ ಎಂಬುವವರು ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕೆವೈಸಿ ಮಾಡಿಸಲು ಬಂದಿದ್ದ ಕನಕಾಪುರದ ನಿವಾಸಿ ಮಾಲತೇಶ ಹಾಗೂ ವ್ಯವಸ್ಥಾಪಕ ಅಲೀಂ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಪರಸ್ಪರ ಕೈ ಕೈ ಮಿಲಾಯಿಸಿದ್ದರಿಂದ ಗಲಾಟೆ ಹೆಚ್ಚಾಯಿತು ಎಂದು ಪ್ರತ್ಯಕ್ಷದಶಿರ್ಯೊಬ್ಬರು ಹೇಳಿದರು.

ಕಚೇರಿಗೆ ಬಂದಿದ್ದ ಮಾಲತೇಶ, ಕೆವೈಸಿ ಮಾಡಿಸಲು ಸರದಿಯಲ್ಲಿ ನಿಂತಿದ್ದರು. ಕಾಳಸಂತೆಯಲ್ಲಿ ಸಿಲಿಂಡರ್ ಕೊಡುತ್ತಿದ್ದೀರಾ. ನ್ಯಾಯಯುತವಾಗಿ ಬುಕ್ಕಿಂಗ್ ಮಾಡಿದ ನಮಗೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಮಾಲತೇಶ ಆರೋಪಿಸಿದ್ದರು. ಅದೇ ವಿಚಾರಕ್ಕೆ ಕಚೇರಿ ಸಿಬ್ಬಂದಿ ಜಗಳ ತೆಗೆದಿದ್ದರು ಎಂದು ತಿಳಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಲತೇಶ, ನನ್ನ ಮೇಲೆ ಕಚೇರಿ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ನಮ್ಮ ಮೇಲೆಯೇ ದೂರು ನೀಡಲು ಮುಂದಾಗಿದ್ದಾರೆ. ಆದರೆ, ನಾನು ಹಲ್ಲೆ ಮಾಡಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ಮಾಡಿದರೆ ಗೊತ್ತಾಗುತ್ತದೆ ಎಂದರು.

ವ್ಯವಸ್ಥಾಪಕ ಅಲೀಂ, ಕಚೇರಿಯಲ್ಲಿ ಗ್ರಾಹಕರ ಸರದಿ ಹೆಚ್ಚಿತ್ತು. ಗ್ರಾಹಕ ಮಾಲತೇಶ, ಸರದಿ ಬಿಟ್ಟು ನೇರವಾಗಿ ಕೆವೈಸಿ ಮಾಡಿಸಲು ಮುಂದಾಗಿದ್ದರು. ಇದರಿಂದ ಇತರೆ ಗ್ರಾಹಕರಿಗೆ ತೊಂದರೆಯಾಗಿತ್ತು. ಅದನ್ನು ಪ್ರಶ್ನಿಸಿದ್ದೆ. ಅಷ್ಟಕ್ಕೆ ಅವರು, ಕಚೇರಿಯಲ್ಲಿ ಫ್ಯಾನ್ ಇಲ್ಲ. ಸಿಲಿಂಡರ್ ಇಲ್ಲ. ಹೇಗೆ ಸರದಿ ನಿಲ್ಲುವುದು ಎಂದು ಜಗಳ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ದೂರಿದರು.

ಕಚೇರಿ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಶಹರ ಠಾಣೆ ಪೊಲೀಸರು, ಮಾಹಿತಿ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net