fire accident: ಅಗ್ನಿ ಅವಘಡ ‘12 ಎಮ್ಮೆ ಸಾವು’

ಗುತ್ತಲ ಸಮೀಪದ ಕನವಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಮ್ಮೆಗಳು ಸುಟ್ಟು ಮೃತಪಟ್ಟಿರುವುದು.
ಗುತ್ತಲ ಸಮೀಪದ ಕನವಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಮ್ಮೆಗಳು ಸುಟ್ಟು ಮೃತಪಟ್ಟಿರುವುದು.
Published on
ವಿಜಯವಾಣಿ ಸುದ್ದಿಜಾಲ ಗುತ್ತಲ
ಯುಗಾದಿ ಹಬ್ಬದ ದಿನವೇ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ 12 ಎಮ್ಮೆಗಳು ಸುಟ್ಟು ಕರಕಲಾದ ದಾರುಣ ಘಟನೆ ಗುರುವಾರ ರಾತ್ರಿ ಸಮೀಪದ ಕನವಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಕನವಳ್ಳಿ ಗ್ರಾಮದ ಪರಮೇಶಪ್ಪ ಸೋಮಪ್ಪ ಜಾಡರ ಎಂಬವವರು ಕೊಟ್ಟಿಗೆ ನಿರ್ಮಿಸಿಕೊಂಡು ಹೈನುಗಾರಿಕೆ ಮಾಡುತ್ತಿದ್ದರು. ಗುರುವಾರ ರಾತ್ರಿ ಕೊಟ್ಟಿಗೆಯ ಅಕ್ಕ ಪಕ್ಕದಲ್ಲಿನ ಮೇವಿನ ಬಣವೆಗಳಿಗೆ ಏಕಾಏಕಿ ಬೆಂಕಿ ತಗುಲಿದೆ. ಜೋರಾದ ಗಾಳಿಗೆ ಬೆಂಕಿ ಕೊಟ್ಟಿಗೆಯನ್ನು ಆವರಿಸಿ ಅಲ್ಲಿದ್ದ 10 ಎಮ್ಮೆ 2 ಕೋಣದ ಮರಿ ಸಾವನ್ನಪ್ಪಿವೆ. 1 ಎಮ್ಮೆ, 1 ಕರು ತೀವ್ರ ಗಾಯಗೊಂಡಿದ್ದು ಚಿಂಚಾಜನಕ ಸ್ಥಿತಿಯಲ್ಲಿವೆ. 2 ಎಮ್ಮೆಗಳು ಅಲ್ಪ ಗಾಯಗೊಂಡಿವೆ. ಜಾನುವಾರುಗಳಿಗೆ ಸಂಗ್ರಹಿಸಲಾಗಿದ್ದ ಸುಮಾರು 20 ಟ್ರ್ಯಾಕ್ಟರ್‌ನಷ್ಟು ಮೆಕ್ಕೆಜೋಳದ ಮೇವು ಸುಟ್ಟ ಭಸ್ಮವಾಗಿದೆ. ಅಲ್ಲದೆ ಕೆಲ ಕೃಷಿ ಉಪಕರಣಗಳು ಸಹ ಸುಟ್ಟಿವೆ.
ಹಾವೇರಿಯಿಂದ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿದವು. ಅಗ್ನಿಶಾಮಕ ವಾಹನ ಬರುವ ಮೊದಲು ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೆಕರ, ಎಂ.ಎಸ್. ವಾಳದ, ಪಕ್ಕೀರಪ್ಪ ಶಿರಹಟ್ಟಿ, ಸಿಬ್ಬಂದಿಗಳಾದ ಬಿ.ಎನ್. ಗಿರೀಶ, ಎಂ.ಎನ್. ನಾಗರಾಜಸ್ವಾಮಿ, ವಿನಯ ಹಿರೇಮಠ, ಜೆ.ಬಿ. ಬಸವರಾಜ, ವಿಶಾಲ ಟೇಳೆ, ಗುತ್ತಲ ಠಾಣೆಯ ಪಿಎಸ್‌ಐ ಟಿ. ನಾಗರಾಜ, ಪೇದೆ ಕುಮಾರ ಕರಕಣ್ಣವನರ ಅಗ್ನಿ ನಂದಿಸಲು ಶ್ರಮಿಸಿದರು.
ಶುಕ್ರವಾರ ಬೆಳಗ್ಗೆ ಬೆಳವಿಗಿಯ ಪಶುಚಿಕಿತ್ಸಾಲಯದ ಮುಖ್ಯ ಪಶುವೈದ್ಯಾಧಿಕಾರಿ ಡಾ.ವಿಜಯಕುಮಾರ ಹಳಕಟ್ಟಿ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಜಿಲ್ಲಾ ಯೋಜನಾ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಸಂತ್ರಸ್ತ ಪರಮೇಶಪ್ಪ ಜಾಡರ ಮನೆಗೆ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಸರ್ಕಾರದಿಂದ ಪರಿಹಾರ ದೊರಕಿಸಲು ಪ್ರಯತ್ನಿಸುವೆ ಎಂದರು.

ಟಿಸಿಯಿಂ ಬೆಂಕಿ?

ಅಗ್ನಿ ಆಕಸ್ಮಿಕಕ್ಕೆ ಘಟನಾ ಸ್ಥಳದ ಸಮೀಪವೇ ಇರುವ ವಿದ್ಯುತ್ ಪರಿವರ್ತಕದಿಂದ ಬೆಂಕಿ ಹತ್ತಿರಬಹುದೆಂದು ಶಂಕಿಸಲಾಗಿದೆ. ಗ್ರಾಮದಲ್ಲಿನ ಬಹುತೇಕ ಎಲ್ಲ ವಿದ್ಯುತ್ ಪರಿವರ್ತಕಗಳಿಂದ ಗಾಳಿ ಬಿಟ್ಟಾಗ ಹಾಗೂ ಇತರ ಸಂದರ್ಭದಲ್ಲಿ ಬೆಂಕಿ ಕಿಡಿಗಳು ಹಾರುತ್ತವೆ ಎನ್ನುತ್ತಾರೆ ಸ್ಥಳೀಯರು. ಟಿಸಿಗಳಲ್ಲಿನ ಡಿವಾಲ್‌ಗಳು ಗಾಳಿಗೆ ಅಥವಾ ಟಿಸಿಗೆ ಅತಿಯಾದ ಲೋಡ್ (ಒತ್ತಡ) ಬಿದ್ದ ಸಂದರ್ಭದಲ್ಲಿ ಡಿವಾಲನ ತಂತಿಗಳು ಕರಗಿ ಬೆಂಕಿ ಕಿಡಿಗಳ ಕೆಳಗೆ ಬೀಳುತ್ತವೆ. ಇದರಿಂದ ಈ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net