ಹಾನಗಲ್ಲ: ಮೂರು ದಶಕಗಳ ರೈತರ ಹೋರಾಟದ ಫಲವಾಗಿರುವ ವರದಾ-ಬೇಡ್ತಿ (Varada-Bedti) ನದಿ ಜೋಡಣೆ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಉತ್ತರಕನ್ನಡದ ಹೋರಾಟಗಾರರಿಗೆ ರೈತಪರ ಚಿಂತನೆಗಳಿಲ್ಲ, ಕುಡಿಯುವ ನೀರನ್ನು ಪಡೆಯುವ ಕಷ್ಟದ ಅರಿವು ಅವರಿಗಿಲ್ಲ, ಈ ಯೋಜನೆ ಸಾಕಾರ ಆಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಾಲೂಕಿನ ವಿವಿಧ ರೈತ ಸಂಘಟನೆಗಳು ಘೊಷಿಸಿದವು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸೇರಿದ್ದ ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಸಾಮೂಹಿಕ ನಾಯಕತ್ವದಲ್ಲಿ ವರದಾ-ಬೇಡ್ತಿ ನದಿ ಜೋಡಣೆಗೆ ನಾವು ಕಟಿಬದ್ಧ ಎಂದರು.
ಉತ್ತರ ಕರ್ನಾಟಕದ ನೀರಿನ ಬವಣೆಗೆ ವಿರೋಧ ವ್ಯಕ್ತಪಡಿಸುವ ಸರ್ಕಾರದಲ್ಲಿ ಉನ್ನತ ಸ್ಥಾನ ಅನುಭವಿಸಿದವರಿಗೆ ಕಷ್ಟದಲ್ಲಿರುವವರ ಸಂಕಷ್ಟದ ಅರಿವಿಲ್ಲ. ವಿಧಾನಸಭೆ ಮಾಜಿ ಅಧ್ಯಕ್ಷ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸೋಂದಾ ಮಠದ ಮಠಾಧೀಶರು ತಮ್ಮ ಸ್ಥಾನದ ಹಾಗೂ ಜವಾಬ್ದಾರಿ ಅರಿತು ವರದಾ-ಬೇಡ್ತಿ ಜೋಡಣೆ ಯೋಜನೆ ಬಗ್ಗೆ ಪ್ರತಿಕ್ರಿಯಿಸಲಿ. ಹೋರಾಟ ಎಂದರೇನು ಎಂಬುದು ನಮಗೆ ಚನ್ನಾಗಿ ಗೊತ್ತಿದೆ. ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ರಾಷ್ಟ್ರೀಯ ಜಲ ನೀತಿಯಲ್ಲಿದೆ. ಇದರಲ್ಲಿ ರಾಜಕೀಯ ಮಾಡುವುದು, ತಮ್ಮ ಪ್ರಭಾವಗಳನ್ನು ಅಭಿವೃದ್ಧಿಯ ವಿರೋಧಕ್ಕೆ ಬಳಸುವುದು ಸರಿಯಲ್ಲ. ಧರ್ಮ, ನ್ಯಾಯ, ನೀತಿಯ ಬಗ್ಗೆ ಎಲ್ಲರಿಗೂ ಜವಾಬ್ದಾರಿ ಇರಲಿ. ಧರ್ಮ ಎಲ್ಲರಿಗೂ ನ್ಯಾಯ ಒದಗಿಸುವಂತಹದ್ದು ಎಂದು ರೈತ ನಾಯಕರು ಪ್ರತಿಕ್ರಿಯಿಸಿದರು.
ವರದಾ-ಬೇಡ್ತಿ ಜೋಡಣೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಂ. ಕೋತಂಬರಿ ಮಾತನಾಡಿ, ಹಾವೇರಿ ಜಿಲ್ಲೆಯ ಎಲ್ಲ ಮಠಾಧೀಶರು, 30 ವರ್ಷಗಳ ಹೋರಾಟದಲ್ಲಿನ ಎಲ್ಲ ಮಾಜಿ ಹಾಲಿ ಜನಪ್ರತಿನಿಧಿಗಳು, ರೈತ ಸಮುದಾಯ ಒಳಗೊಂಡು ಜಾಗೃತಿ ಸಮಾವೇಶಕ್ಕೆ ಸಜ್ಜಾಗಿದ್ದೇವೆ. ವರದಾ- ಬೇಡ್ತಿ ನದಿ ಜೋಡಣೆ ನಮ್ಮ ಹಕ್ಕು. ಯೋಜನೆ ಅವೈಜ್ಞಾನಿಕ ಎನ್ನುವವರು ಇದರ ಬಗೆಗೆ ಸರಿಯಾದ ಜ್ಞಾನ ಪಡೆಯಲಿ. ಬಯಲು ಸೀಮೆಯ ಅಭಿವೃದ್ಧಿಯ ವಿರೋಧಕ್ಕೆ ಪ್ರತಿಭಟನೆ ಒಳ್ಳೆಯ ಬೆಳವಣಿಗೆ ಅಲ್ಲ. ಕಾರವಾರ ಜಿಲ್ಲೆಯ ತುಂಬ ಹಾವೇರಿ ಜಿಲ್ಲೆಯ ತರಕಾರಿ ಮಾರಾಟವಾಗುತ್ತಿದೆ. ಇಲ್ಲಿ ನೀರಿಲ್ಲದಿದ್ದರೆ, ನಿಮಗೆ ತರಕಾರಿಯೂ ಇಲ್ಲ. ಎಲ್ಲವೂ ಬಂದ್ ಎಂಬ ಎಚ್ಚರಿಕೆಯನ್ನು ಯೋಜನೆ ವಿರೋಧಿಸುವವರಿಗೆ ನೀಡುತ್ತಿದ್ದೇವೆ ಎಂದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ವಿವಿಧ ರೈತ ಸಂಘಗಳ ಅಧ್ಯಕ್ಷರಾದ ಮರಿಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ರಾಮು ಯಳ್ಳೂರ, ಶಿವಲಿಂಗಪ್ಪ ತಲ್ಲೂರ, ಎಂ.ಎಂ. ಬಡಗಿ, ಅರಬಾಜ ಇನಾಂದಾರ, ಮಹದೇವಪ್ಪ ಹರಿಜನ, ಮಲಕಪ್ಪ ಕೂಸನೂರ, ಶಿವಾನಂದ ಇದ್ದರು.