

ರಾಣೆಬೆನ್ನೂರ: ಹೈದರಾಬಾದ್ ಬೀಜೋತ್ಪಾದನೆ ಕಂಪನಿಯವರು ಬೀಜ ಬೆಳೆದುಕೊಟ್ಟ ರೈತರಿಗೆ ಹಣ ನೀಡದೆ ವಂಚನೆ ಮಾಡುತ್ತಿದ್ದು ತಾಲೂಕು ಹಾಗೂ ಜಿಲ್ಲಾಡಳಿತ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸೀಡ್ಸ್ ಸಂಘಟಿಕ ಮಹೇಂದ್ರ ಜ್ಯೋತಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರ ಹಾಗೂ ಹೂವಿನಹಡಗಲಿ ಭಾಗದ ೧೪೧ ರೈತರಿಗೆ ಟಾಟಾ ರ್ಯಾಲಿಸ್ ಇಂಡಿಯಾ ಎಂಬ ಬೀಜೋತ್ಪಾದನೆ ಕಂಪನಿಯವರು ಎಂಎಂಎಚ್-೭ ಹಾಗೂ ಎಂಎಂಎಚ್-೪೭ ಹೆಸರಿನ ಬೀಜ ಬೆಳೆದು ಕೊಡಲು ಒಟ್ಟು ೩೯೫ ಎಕರೆ ಭೂಮಿಗೆ ಒಪ್ಪಂದ ಮಾಡಿಕೊಂಡಿದ್ದರು.
ರೈತರು ಎಂಎಂಎಚ್-೭ ಹಳೇಯ ತಳಿ ಇದನ್ನು ಬೆಳೆದು ಕೊಡುತ್ತೇವೆ. ಆದರೆ ಎಂಎಂಎಚ್-೪೭ ಹೊಸ ತಳಿ ಆಗಿದ್ದರಿಂದ ಇದು ಎಷ್ಟೇ ಪ್ರಮಾಣದಲ್ಲಿ ಬೆಳೆದರೂ ತೆಗೆದುಕೊಳ್ಳಬೇಕು. ಎಂಎಂಎಚ್-೭ ಗೆ ನೀಡದಷ್ಟೇ ಹಣವನ್ನು ಇದಕ್ಕೂ ನೀಡಬೇಕು ಎಂದು ತಿಳಿಸಿದ್ದೇವು. ಅದಕ್ಕೆ ಕಂಪನಿಯವರು ಒಪ್ಪಿಗೆ ಸೂಚಿಸಿದರು.
ಆದರೀಗ ಕಂಪನಿಯವರು ಎಂಎಂಎಚ್-೪೭ ಬೀಜದ ಜಿಒಟಿ ಫೇಲ್ ಆಗಿದೆ. ಆದ್ದರಿಂದ ಇದರ ಹಣ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ೧೯೫ ಎಕರೆ ಪ್ರದೇಶದಲ್ಲಿ ಎಂಎಂಎಚ್-೪೭ ಮೆಕ್ಕೆಜೋಳ ಬೀಜ ಬೆಳೆದಿದ್ದೇವೆ. ಈ ಎಲ್ಲ ರೈತರಿಗೆ ಕಂಪನಿಯವರು ಬೀಜ ತೆಗೆದುಕೊಂಡು ಹಣ ನೀಡದೆ ಮೋಸ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ನಮಗೆ ಜಿಲ್ಲಾಡಳಿತ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನದಲ್ಲಿ ಅನಿವಾರ್ಯವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತರಾದ ಫಕ್ಕೀರಪ್ಪ ದೊಡ್ಡಮನಿ, ದಿಳ್ಳೆಪ್ಪ ದೊಡ್ಡಮನಿ, ಶಂಕ್ರಪ್ಪ ಗುಳೇದ, ನಾಗಪ್ಪ ಪರಸಪ್ಪನವರ, ಬಸವರಾಜ ಅರಳಹಳ್ಳಿ, ಶಂಕ್ರಪ್ಪ ಕೊರಡೂರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.