

ರಾಣೆಬೆನ್ನೂರ: ಕಾಡಿನಿಂದ ತಪ್ಪಿಸಿಕೊಂಡ ಒಂಟಿ ಸಲಗವೊಂದು ತಾಲೂಕಿನ ಹಲಗೇರಿ-ಕೂಸಗೂರ ಗ್ರಾಮದ ಬಳಿಯ ನಿಲಗಿರಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ.
ಕಾಡಾನೆಯು ಶಿಕಾರಿಪುರ ಅರಣ್ಯ ಪ್ರದೇಶದಿಂದ ಹಿರೇಕೆರೂರ ಮಾರ್ಗವಾಗಿ ರಾಣೆಬೆನ್ನೂರ ತಾಲೂಕಿನ ಕೂಸಗೂರ ಬಳಿಯ ಅರಣ್ಯ ಪ್ರದೇಶದಲ್ಲಿ ಬಿಡುಬಿಟ್ಟಿದೆ.
ಆನೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಸಕ್ರೆಬೈಲ್ ದಿಂದ ಎರಡು ಸಾಕಾಣೆಗಳನ್ನು ತರಿಸಿದ್ದಾರೆ. ಮೈಸೂರಿನಿಂದ ಇನ್ನೂ ಮೂರು ಆನೆಗಳು ಬರುತ್ತಿದ್ದು ಅವುಗಳು ಬಂದ ಬಳಿಕ ಕಾಡಾನೆ ಸೆರೆಯ ಕಾರ್ಯಾಚರಣೆ ಆರಂಭಿಸಲಿದ್ದಾರೆ.
ಆನೆ ಬಿಡುಬಿಟ್ಟಿರುವ ಪ್ರದೇಶದ ಕೂಗಳತೆ ದೂರದಲ್ಲಿ ಖಾಸಗಿ ಪ್ರಾಥಮಿಕ ಶಾಲೆಯಿದೆ. ಜತೆಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೂಡ ಇದೆ. ಸದ್ಯ ಆನೆ ಎಲ್ಲಿಯೂ ಹೋಗದಂತೆ ಅರಣ್ಯಾಧಿಕಾರಿಗಳು ಸುತ್ತುವರಿದಿದ್ದಾರೆ.
ಆನೆ ನೋಡಲು ಸಾವಿರಾರು ಜನ ಮುಗಿಬಿದ್ದಿದ್ದು ಜನರ ನಿಯಂತ್ರಣ ಮಾಡುವುದು ಪೊಲೀಸರಿಗೆ ತಲೆನೋವಾಗಿದೆ.