

ರಾಣೆಬೆನ್ನೂರು: ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯವನ್ನು ಖಂಡಿಸಿ ಇಲ್ಲಿನ ಕೊಟ್ಟೋರೇಶ್ವರ ನಗರ, ಅಡವಿ ಅಂಜನೇಯ ಬಡಾವಣೆ ಹಾಗೂ ಹೊಸನಗರದ ನಿವಾಸಿಗಳು ರಾತ್ರಿ ಹೆಸ್ಕಾಂ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಮಳೆ ಬಂದಾಗಲೆಲ್ಲ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆರೆ ಹತ್ತಿರದಲ್ಲಿರುವ ಈ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಹಾವು, ಚೇಳು ಸೇರಿದಂತೆ ವಿಷಜಂತುಗಳ ಕಾಟ ಹೆಚ್ಚಾಗಿ ಜನರಲ್ಲಿ ಭಯದ ವಾತಾವರಣ ನಿಮಾರ್ಣವಾಗಿದೆ.
ಇದರಿಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇದೇ ವಿಷಯ ಕುರಿತು ಕಳೆದ ವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮುಂಗಾರು ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದ್ದು, ತಕ್ಷಣವೇ ಶಾಶ್ವತ ಕ್ರಮ ಒದಗಿಸಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿ ನೀರಲಗಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ 8ರಿಂದ 10ದಿನದ ಒಳಗಾಗಿ ಕೆರೆಯ ದಂಡೆಯ ಮೇಲೆ ಹೊಸ ಕಂಬಗಳನ್ನು ಹಾಕಿ ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.--
ಕೊಟ್ಟೋರೇಶ್ವರ ನಗರ, ಅಡವಿ ಅಂಜನೇಯ ಬಡಾವಣೆ ಹಾಗೂ ಹೊಸನಗರದ ನಿವಾಸಿಗಳು ಪ್ರತಿಭಟನೆಯಲ್ಲಿದ್ದರು.