ಅರ್ಹ ಮತದಾರರ ಹಕ್ಕು ರದ್ದು ಮಾಡಬೇಡಿ

ಎಐಸಿಸಿ ಉಸ್ತುವಾರಿ ಕಮಲೇಶ ಪಾಟೀಲ ಹೇಳಿಕೆ
A massive protest rally, themed 'Vote Bachao, Desh Bachao' (Save the Vote, Save the Nation), was organized by the Congress party in Ranebennur (Rattihalli) on Sunday. Kamalesh Patil, MLA U.B. Banakar, former MLA B.H. Bannikoda, Sanjeevkumar Neeralagi, and others were present.
ರಟ್ಟಿಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಭಾನುವಾರ ವೋಟ್ ಬಚಾವೋ ದೇಶ ಬಚಾವೋ ಬೃಹತ್ ಪ್ರತಿಭಟನಾ ರ‌್ಯಾಲಿ ಜರುಗಿತು. ಕಮಲೇಶ ಪಾಟೀಲ, ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಸಂಜೀವಕುಮಾರ ನೀರಲಗಿ ಇತರರಿದ್ದರು.
Published on: 

ರಟ್ಟಿಹಳ್ಳಿ: ಕೇಂದ್ರ ಸರ್ಕಾರ ದೇಶದಲ್ಲಿ ಎಸ್‌ಐಆರ್ ನೆಪದಲ್ಲಿ ಅರ್ಹ ಮತದಾರರ ಮತದಾನದ ಹಕ್ಕು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ಎಐಸಿಸಿ ಉಸ್ತುವಾರಿ ಹಾಗೂ ಸಿಡಬ್ಲುೃಸಿ ಸದಸ್ಯ ಕಮಲೇಶ ಪಟೇಲ್ ಕೇಂದ್ರದ ವಿರುದ್ಧ ಕಿಡಿಕಾರಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ರಟ್ಟಿಹಳ್ಳಿ ಹಾಗೂ ಹಿರೇಕೆರೂರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವೋಟ್ ಬಚಾವೋ ದೇಶ ಬಚಾವೋ ಬೃಹತ್ ಪ್ರತಿಭಟನಾ ರ‌್ಯಾಲಿ ಹಾಗೂ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಅಧಿಕಾರದ ದುರಾಸೆಯಿಂದ ಎಸ್‌ಐಆರ್ ನೆಪದಲ್ಲಿ ರಾಜ್ಯದಲ್ಲಿ ಸುಮಾರು 1 ಕೋಟಿ ಮತಗಳನ್ನು ಡಿಲೀಟ್ ಮಾಡಿಸಿದ್ದು, ಮಹದೇವಪುರ ವಿಧಾನಸಭಾ ಕ್ಷೇತ್ರ ಒಂದರಲ್ಲೇ ಲಕ್ಷ ಮತಗಳನ್ನು ಡಿಲೀಟ್ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶಕುಮಾರ್ ಅವರು ಎನ್‌ಡಿಎ ಸರ್ಕಾರದ ಆಣತಿಯಿಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು.

ಎಸ್‌ಐಆರ್ ಅಕ್ರಮದ ವಿರುದ್ಧ ಹೋರಾಡುವ ನಾಯಕರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಎಲ್ಲ ಅಕ್ರಮದ ಹೊಣೆಹೊತ್ತು ಮುಖ್ಯ ಚುನಾವಣಾಧಿಕಾರಿ ಜ್ಞಾನೇಶಕುಮಾರ್, ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ಯಾವುದೇ ರೀತಿಯ ಮತಗಳವು ಹಾಗೂ ಅರ್ಹ ಮತಗಳು ಡಿಲೀಟ್ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ದ್ಯಾವಕ್ಕಳವರ, ರಮೇಶ ಮಡಿವಾಳರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟೇಶ, ಕೆಪಿಸಿಸಿ ಉಸ್ತುವಾರಿ ಸುರೇಶ ಸವಣೂರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಸಂತಾ, ಪಪಂ ಸದಸ್ಯ ಪಿ.ಡಿ. ಬಸನಗೌಡ್ರ, ಸರ್ಫರಾಜ್ ಮಾಸೂರ, ವಿಜಯ ಅಂಗಡಿ, ನಾಗನಗೌಡ ಕೋಣ್ತಿ, ಮಂಜು ಮಾಸೂರ, ಸಣ್ಣತಮ್ಮಣ್ಣ ಬಾರ್ಕಿ, ಎಸ್.ವಿ. ಪಾಟೀಲ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ನಾರಾಯಣಪ್ಪ ಗೌರಕ್ಕನವರ, ವಿಜಯ ಅಂಗಡಿ, ಪ್ರಕಾಶಗೌಡ ಪಾಟೀಲ, ಚಂದ್ರಪ್ಪ ಬೇಡರ, ಲೀಲಾವತಿ ಗೋಣಿಗೇರಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಇದ್ದರು.

ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣ ಭಗತ್‌ಸಿಂಗ್ ವೃತ್ತದಿಂದ ಮಹಾಲಕ್ಷ್ಮೀ ಸರ್ಕಲ್, ಹಳೇ ಬಸ್ ಸ್ಯಾಂಡ್ ಮೂಲಕ ವೀರಭದ್ರೇಶ್ವರ ದೇವಸ್ಥಾನದ ಆವರಣದವರೆಗೆ ವೋಟ್ ಬಚಾವೋ ದೇಶ ಬಚಾವೋ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.