Do good deeds ಟೀಕೆಗಳಿಗೆ ಕಿವಿಗೊಡದೆ ಸತ್ಕಾರ್ಯ ಮಾಡಿ

ಹಾನಗಲ್ಲಿನಲ್ಲಿ ಏರ್ಪಾಟಾಗಿದ್ದ ಧಾರ್ಮಿಕ ಗೋಷ್ಠಿಯಲ್ಲಿ ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಬಸವರಾಜ ಬೊಮ್ಮಾಯಿ, ಶ್ರೀನಿವಾಸ ಮಾನೆ, ವಿಠಲ್ ಚೌಗುಲಾ, ವೈ.ಕೆ. ಜಗದೀಶ ಇತರರಿದ್ದರು.
ಹಾನಗಲ್ಲಿನಲ್ಲಿ ಏರ್ಪಾಟಾಗಿದ್ದ ಧಾರ್ಮಿಕ ಗೋಷ್ಠಿಯಲ್ಲಿ ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಬಸವರಾಜ ಬೊಮ್ಮಾಯಿ, ಶ್ರೀನಿವಾಸ ಮಾನೆ, ವಿಠಲ್ ಚೌಗುಲಾ, ವೈ.ಕೆ. ಜಗದೀಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಲಹೆ
  • ಹಾನಗಲ್ಲದಲ್ಲಿ ಧಾರ್ಮಿಕ ಗೋಷ್ಠಿ
ಹಾನಗಲ್ಲ:

ಕಾವಿ ತೊಟ್ಟವರನ್ನು ಪುಳಕಿತಗೊಳಿಸುವ ಹಾನಗಲ್ಲ ಧರ್ಮದ ನಡೆಯಲ್ಲಿ ಮೇರು ಸ್ಥಾನ ಹೊಂದಿದ್ದಲ್ಲದೆ, ಭಕ್ತರ ಕೈ ಹಿಡಿದು ಭವಿಷ್ಯ ರೂಪಿಸಿದ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳು ಇಲ್ಲಿನ ಆದರ್ಶ ಎಂದು ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ಬುಧವಾರ ಏರ್ಪಾಟಾಗಿದ್ದ ಶ್ರೀ ಗ್ರಾಮದೇವಿ ಶಿಲಾ ಮಂದಿರ ಉದ್ಘಾಟನೆ ಹಾಗೂ ದೇವಿ ಪ್ರತಿಷ್ಠಾಪನೆ ಕಳಸಾರೋಹಣ ಕಾರ್ಯಕ್ರಮದ ಧಾರ್ಮಿಕ ಗೋಷ್ಠಿಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ‘ದೇವರೇ ನಮ್ಮೆಲ್ಲರ ಮಾಲೀಕ. ನಾವು ಉಪಯೋಗಿಸುವವರು. ಹುಟ್ಟು-ಸಾವಿನ ದಂಡೆಯ ನಡುವಿನ ದಿನಗಳು ಮಾತ್ರ ನಮ್ಮವು. ನಾವು ಉಣ್ಣುವ ಪ್ರತಿ ತುತ್ತು ದೇವರ ಕೃಪೆ. ನಾವೆಲ್ಲ ಒಳ್ಳೆಯ ಕೆಲಸದ ಮೂಲಕ ಬದುಕಬೇಕು. ಸಾಮಾಜಿಕ ಕಾರ್ಯದಲ್ಲಿ ಹೊಗಳಿಕೆ-ತೆಗಳಿಕೆ, ಮಾನ-ಅಪಮಾನಗಳು ನಮ್ಮ ಸೇವೆಗೆ ಅಡ್ಡಿಯಾಗಬಾರದು. ಟೀಕೆಗಳನ್ನು ಪರಿಗಣಿಸಬೇಡಿ. ಸತ್ಕಾರ್ಯವನ್ನೇ ನಂಬಿ ಸೇವೆ ಮಾಡಿ ಎಂದರು.
ಸಾನ್ನಿಧ್ಯವಹಿಸಿದ್ದ ಹುಬ್ಬಳ್ಳಿ ಮೂರು ಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಭಗವಂತನಲ್ಲಿ ವಿಶ್ವಾಸವಿಟ್ಟು ಬದುಕಬೇಕು. ಅವಧೂತರ, ಸಾಧಕ ಮಾತು ಸತ್ಯವಾಗುತ್ತಿದ್ದವು. ಅವರು ಹಾಗೇ ಬದುಕಿದ್ದರು. ಭಾರತ ಅಧ್ಯಾತ್ಮದ ಪುಣ್ಯ ನೆಲ. ಶಿವನಿಗಿಂತ ದೇವಿ ಆರಾಧಕರೇ ಹೆಚ್ಚು. ನಿರ್ಮಲ ಭಾವದ ಸೇವೆಗೆ ಭಗವಂತ ಮೆಚ್ಚುತ್ತಾನೆ ಎಂದರು.
ಶ್ರೀ ಕ್ಷೇತ್ರ ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿಗಳು ಮಾತನಾಡಿ, ಜನಸೇವೆ ಜನಾರ್ಧನ ಸೇವೆ ಎಂಬುದು ಸತ್ಯದ ಆಚರಣೆ. ಹಿರಿಯರ ಅನಂತ ಪುಣ್ಯದಿಂದ ನಮ್ಮ ಬದುಕು ಸಾರ್ಥಕತೆಯತ್ತ ಸಾಗುವುದರ ಜತೆಗೆ, ನಾವೂ ಪುಣ್ಯವಂತರಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ದೈವತ್ವಕ್ಕೆ ಇರುವ ಶಕ್ತಿಯ ಅನುಭವವಾಗಬೇಕು. ನಿಷ್ಕಲ್ಮಷ ಭಕ್ತಿಯಲ್ಲಿ ದೇವರಿದ್ದಾನೆ. ನಮ್ಮ ಹೃದಯ ಮತ್ತು ಮನಸು ಏಕಾಗ್ರತೆಯಿಂದ ಭಕ್ತಿ ಮಾರ್ಗದಲ್ಲಿರಬೇಕು ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಭಗವಂತನ ಬಗೆಗೆ ನಮಗಿರುವ ಅಚಲ ನಂಬಿಕೆಯ ಜತೆಗೆ ನಮ್ಮಲ್ಲಿ ಮಾನವೀಯ ಮೌಲ್ಯಗಳು ಪ್ರತಿಷ್ಠಾಪನೆಯಾಗಬೇಕು. ದೇವರ ದರ್ಶನದಲ್ಲಿನ ನಮ್ಮ ನಿರ್ಮಲ ಭಾವ ನಮಗೆ ಎಲ್ಲವನ್ನು ಕರುಣಿಸಬಲ್ಲದು. ಅದು ಸ್ವಚ್ಛಂದ ಮನಸಿನ ನಿಸ್ವಾರ್ಥದ ಭಾವವಾಗಿರಬೇಕು ಎಂದು ತಿಳಿಸಿದರು.
ಗ್ರಾಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಅಧ್ಯಕ್ಷತೆ ವಹಿಸಿದ್ದರು. ಹೂವಿನ ಹಡಗಲಿಯ ಹಿರಿಯ ಜಾತಲಿಂಗ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ತಹಸೀಲ್ದಾರ್ ವಿಠ್ಠಲ ಚೌಗುಲಾ, ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ , ಇತರರಿದ್ದರು. ಸರಸ್ವತಿ ಸಂಗೀತ ವಿದ್ಯಾಲಯದ ಕಲಾವಿದರು ಪ್ರಾರ್ಥಿಸಿದರು. ರಾಜು ಗೌಳಿ ಆಶಯ ನುಡಿಗಳನ್ನಾಡಿದರು. ಗಣೇಶ ಮೂಡ್ಲಿಯವರ ಹಾಗೂ ಭೋಜರಾಜ ಕರೂದಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net