Crop insurance: ರೈತರಿಗೆ ಬೆಳೆ ವಿಮೆ ಕೊಡಿಸಲು ಬೀದಿಗಿಳಿದ ಬಿಜೆಪಿ
ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನ ರೈತರಿಗೆ ಬೆಳೆ ವಿಮೆ ಜಮೆ ಆಗದೆ ಇರುವುದನ್ನು ಖಂಡಿಸಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಬಿ.ಸಿ.ಪಾಟೀಲ, ಸಂಜೀವಯ್ಯ ಕಬ್ಬಿಣಕಂತೀಮಠ, ದೇವರಾಜ ನಾಗಣ್ಣನವರ, ಎನ್.ಎಂ.ಈಟೇರ, ಪ್ರಕಾಶಗೌಡ ಗೌಡರ, ರವಿಶಂಕರ ಬಾಳಿಕಾಯಿ, ಆರ್.ಎನ್.ಗಂಗೋಳ ಇದ್ದರು.
ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನ ಒಟ್ಟು 23 ಪಂಚಾಯಿತಿಯ ರೈತರಿಗೆ ಬೆಳೆ ವಿಮೆ ಜಮೆ ಆಗಿಲ್ಲ. ಇದಕ್ಕೆ ಕೃಷಿ ಇಲಾಖೆ, ಕಂದಾಯ ಹಾಗೂ ಸಾಂಕಿಕ ಇಲಾಖೆಗಳ ಅಧಿಕಾರಿಗಳು ನೇರ ಹೊಣೆ. ಆದಷ್ಟು ಬೇಗ ರೈತರಿಗೆ ಬೆಳೆ ವಿಮೆ ಜಮೆ ಆಗಿದೆ ಹೋದಲಿ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಎಚ್ಚರಿಸಿದರು.
ರೈತರಿಗೆ ಬೆಳೆ ವಿಮೆ ಜಮೆ ಆಗದೆ ಇರುವುದನ್ನು ಖಂಡಿಸಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಬುಧವಾರ ಪಟ್ಟಣದ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ನಡೆಸಿ, ನಂತರ ತಹಸೀಲ್ದಾರ್ ಎಂ. ರೇಣುಕಾ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ರೈತರು 2025-26ನೇ ಸಾಲಿನ ಬೆಳೆವಿಮೆ ಮಾಡಿಸಿದ್ದರು. ಅಕಾಲಿಕ ಮಳೆ ಹಾಗೂ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟವಾಗಿದೆ. ಆದರೆ, ತಾಲೂಕಿನ ಕೆಲವೇ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಬೆಳೆವಿಮೆ ಜಮಾ ಆಗಿದ್ದು, ಉಳಿದಂತೆ ಹಿರೇಕೆರೂರ ಹಾಗೂ ರಟ್ಟಿಹಳ್ಳಿ ತಾಲೂಕಗಳ ವ್ಯಾಪ್ತಿಯಲ್ಲಿ 23 ಗ್ರಾಮ ಪಂಚಾಯಿತಿಗಳ ಗ್ರಾಮಗಳ ರೈತರಿಗೆ ಬೆಳೆ ವಿಮೆ ಜಮಾ ಆಗಿಲ್ಲ. ಈಗ ಜಮಾ ಆದಂತಹ ರೈತರ ಜಮೀನುಗಳು ಹಾಗೂ ಜಮಾ ಆಗದೇ ಇರುವ ರೈತರ ಜಮೀನುಗಳು ಅಕ್ಕ-ಪಕ್ಕದಲ್ಲಿದ್ದು, ಅಂಕಿ-ಅಂಶಗಳ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ವೇ ಮಾಡಿದ್ದರಿಂದ ಹಣ ಜಮಾ ಆಗಿಲ್ಲ ಎಂದರು.
ರಾಜ್ಯ ಸರ್ಕಾರ ಹಾಗೂ ವಿಮೆ ಕಂಪನಿ, ಅಧಿಕಾರಿಗಳು ರೈತರ ನೆರವಿಗೆ ಧಾವಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ತಹಸೀಲ್ದಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ನಮ್ಮ ತಾಲೂಕಿನ ರೈತರ ವಿಮೆ ಹಣ ರೈತರ ಖಾತೆಗೆ ಬಿಡುಗಡೆಗೊಳಿಸಬೇಕು. ಮುಂಗಾರು ಹಂಗಾಮು ಪ್ರಾರಂಭಗೊಂಡಿದ್ದು, ರೈತರಿಗೆ ಸಕಾಲಕ್ಕೆ ರಸಗೊಬ್ಬರ ಸಿಗುತ್ತಿಲ್ಲ. ಸರ್ಕಾರ ದಿನಕ್ಕೊಂದು ಹೊಸ ನಿಯಮ ಮಾಡುತ್ತಿದ್ದು, ಇದೀಗ ಗೊಬ್ಬರಕ್ಕೆ ಎಫ್‌ಐಡಿ ಮತ್ತು ಲಿಂಕ್ ಎಂಬುವುದನ್ನು ತಂದಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ? ಎಂದು ಸರ್ಕಾರವನ್ನು ಪ್ರಶ್ನಿಸಿದರು.