

ರಾಣೆಬೆನ್ನೂರ: ಶಾಸಕ ಪ್ರಕಾಶ ಕೋಳಿವಾಡ ಅವರು ಅಹಿಂದ ನಾಯಕ ಎಂದು ಹೇಳುತ್ತಿದ್ದು, ವಾರದಿಂದ ಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ನಗರಸಭೆ ಸದಸ್ಯ ನಿಂಗರಾಜ ಕೋಡಿಹಳ್ಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಕುಂಠಿತಗೊಳಿಸಿದ್ದಾರೆ. ನಗರದಲ್ಲಿ ನಗರಸಭೆ ಮಾಲ್ಕಿ ಮಳಿಗೆ ಮಾಲೀಕರಿಗೆ ನೋಟಿಸ್ ಜಾರಿಮಾಡಲಾಗಿದೆ. ನಗರದಲ್ಲಿನ 964 ಮಳಿಗೆಗಳ ಪೈಕಿ 36 ಮಳಿಗೆಗಳನ್ನು ಹೊರತುಪಡಿಸಿ ಉಳಿದ ಮಳಿಗೆಗಳಿಗೆ ನೋಟಿಸ್ ನೀಡಲಾಗಿದ್ದು, ಮರುಹಾರಜು ಮಾಡಬೇಕು. ಯಾವುದೆ ಮಧ್ಯವರ್ತಿಗಳ ಮೂಲಕ ಹಣ ವಸೂಲಿ ಮಾಡಿದರೆ ಹೋರಾಟ ಮಾಡಲಾಗುವುದು ಹಾಗೂ ಲೋಕಾಯುಕ್ತ ತನಿಖೆಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ಎ.ಬಿ.ಪಾಟೀಲ, ಚೋಳಪ್ಪ ಕಸವಾಳ, ಸಿದ್ದು ಚಿಕ್ಕಬಿದರಿ, ಬಸಣ್ಣ ಹುಲ್ಲತ್ತಿ, ಪವನಕುಮಾರ ಮಲ್ಲಾಡದ, ಪ್ರಕಾಶ ಪೂಜಾರ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ ಜಡಮಲಿ ಸುದ್ದಿಗೋಷ್ಠಿಯಲ್ಲಿದ್ದರು.