CHCs problem: ಸಿಬ್ಬಂದಿ ಬಲವಿಲ್ಲದೆ ಬಲಹೀನವಾದ ಸಿಎಚ್‌ಸಿ!

ರಟ್ಟಿಹಳ್ಳಿ ತಾಲೂಕಿನ ಮಾಸೂರು ಸಮುದಾಯ ಆರೋಗ್ಯ ಕೇಂದ್ರ.
ರಟ್ಟಿಹಳ್ಳಿ ತಾಲೂಕಿನ ಮಾಸೂರು ಸಮುದಾಯ ಆರೋಗ್ಯ ಕೇಂದ್ರ.
Published on
ರಟ್ಟಿಹಳ್ಳಿ: ತಾಲೂಕಿನ ಮಾಸೂರು ಸಮುದಾಯ ಆರೋಗ್ಯ ಕೇಂದ್ರ ಉತ್ತಮ ಸೇವೆ ನೀಡುತ್ತಿದ್ದರೂ ಸಮರ್ಪಕ ಸಿಬ್ಬಂದಿ ಬಲವಿಲ್ಲದೆ ಬಳಲುತ್ತಿದೆ.
ಈ ಕೇಂದ್ರವನ್ನು 2012ರಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಾಸೂರು ಸೇರಿದಂತೆ ಸುತ್ತಮುತ್ತಲಿನ 15ರಿಂದ 20ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರಿಗೆ ಇದೇ ಆಧಾರವಾಗಿದೆ. ಪ್ರತಿದಿನ ಇಲ್ಲಿಗೆ ಹೊರರೋಗಿಗಳು 300ಕ್ಕೂ ಹೆಚ್ಚು ಜನ ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ. 20 ರಿಂದ 25 ಒಳರೋಗಿಗಳು ಇರುತ್ತಾರೆ. ಕಳೆದ ಜನವರಿ ತಿಂಗಳಲ್ಲಿ 31, ಫೆಬ್ರವರಿ 30, ಮಾರ್ಚ್ 50, ಏಪ್ರಿಲ್ 24 ಮತ್ತು ಮೇ ಇಲ್ಲಿಯವರೆಗೆ 21 ಒಟ್ಟು 155 ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ನಾರ್ಮಲ್ ಡಿಲವರಿಯನ್ನು ಪ್ರತಿ ದಿವಸ ಇಲ್ಲಿ ಮಾಡುತ್ತಿದ್ದರೂ ಸಿಜೇರಿಯನ್ ಹೆರಿಗೆಗಳಿಗೆ ಶುಕ್ರವಾರವನ್ನೇ ಅವಲಂಬಿಸಬೇಕಾಗದ ಪರಿಸ್ಥಿತಿ ಇದೆ. ಅರಿವಳಿಕೆ ತಜ್ಞರು ವಾರದಲ್ಲಿ ಕೇವಲ ಶುಕ್ರವಾರ ಮಾತ್ರ ಇಲ್ಲಗೆ ಆಗಮಿಸುವುದರಿಂದ ಅಗತ್ಯವಿರುವ ಸಿಜೇರಿಯನ್ ಡಿಲವರಿಯನ್ನು ಶುಕ್ರವಾರ ಮಾಡಲಾಗುತ್ತದೆ. ಉಳಿದ ದಿವಸಗಳಲ್ಲಿ ಸೀಜರಿನ್ ಡಿಲವರಿಗೆ ಬೇರೆ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಹೀಗಾಗಿ ಇಲ್ಲಿ ಅರಳಿಕೆ ತಂತ್ರಜ್ಞರ ನೇಮಕವಾಬೇಕಾಗಿದೆ.
ಸಿಬ್ಬಂದಿ ಕೊರತೆ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಟ್ಟು 34 ಹುದ್ದೆಗಳು ಮಂಜೂರಾಗಿವೆ. ಆಡಳಿತ ವೈದ್ಯಾಧಿಕಾರಿ 1, ಅರಿವಳಿಕೆ ತಜ್ಞರು 1, ಶುಶ್ರೂಷಕ ಅಧಿಕಾರಿಗಳು 2, ಪ್ರಥಮ ದರ್ಜೆ ಸಹಾಯಕರು 1, ಕಿರಿಯ ಫಾರ್ಮಸಿ ಅಧಿಕಾರಿಗಳು 2, ಅಟೆಂಡರ್ ಗ್ರೇಡ್-2 ಹುದ್ದೆಗಳು ಖಾಲಿ ಇವೆ. ಆಸ್ಪತ್ರೆಯ ಪಕ್ಕದಲ್ಲಿ ಆಡಳಿತ ವೈದ್ಯಾಧಿಕಾರಿಗಳಿಗೆ ಸೇರಿದಂತೆ ಸಿಬ್ಬಂದಿಗಳಿಗೆ ಒಟ್ಟು 4 ವಸತಿ ಗೃಹಗಳಿವೆ. ಆದರೆ, ಅವು ಶಿಥಿಲಾವಸ್ಥೆ ತಲುಪಿವೆ.
ಹೆಚ್ಚುವರಿ ಕೊಠಡಿ ಇರಲಿ: ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿಯೇ ಸಿ.ಎಚ್.ಸಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದಲ್ಲಿ ಕೊಠಡಿಗಳ ಕೊರತೆ ಇರುವುದರಿಂದ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ. ಆಸ್ಪತ್ರೆಯ ಅಕ್ಕ ಪಕ್ಕದಲ್ಲಿ ಸ್ಥಳಾವಕಾಶ ಇರುವುದರಿಂದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡಿದರೇ ಉತ್ತಮ ಸೇವೆಗೆ ಅನುಕೂಲವಾಗುತ್ತದೆ ಎಂಬುವುದು ವೈದ್ಯರು ಮತ್ತು ಸಿಬ್ಬಂದಿ ಅಭಿಪ್ರಾಯವಾಗಿದೆ.
ಅನುದಾನಕ್ಕೆ ಪತ್ರ: ಶಾಸಕ ಯು.ಬಿ. ಬಣಕಾರ ಕಳೆದ ಜನವರಿ ತಿಂಗಳಲ್ಲಿ ಮಾಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವಸತಿ ಗೃಹ, ಕೊಠಡಿಗಳ ನಿರ್ಮಾಣ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ.

ಆಸ್ಪತ್ರೆಗೆ ಅಗತ್ಯವಿರುವ ಕೊಠಡಿ, ಕಾಂಪೌಂಡ್ ನಿರ್ಮಾಣ, ವಸತಿ ಗೃಹಗಳ ನಿರ್ಮಾಣ ಸೇರಿದಂತೆ ಕೆಲವು ಮೂಲ ಸೌಕರ್ಯ ಒದಗಿಸುವಂತೆ ಶಾಸಕರಿಗೆ ಮತ್ತು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅರಿವಳಿಕೆ ತಜ್ಞರ ಸೇವೆ ಇಲ್ಲಿ ಹೆಚ್ಚು ಅನಿವಾರ್ಯ ಇದೆ. ಈ ತಜ್ಞರನ್ನು ನೇಮಿಸಿದರೆ ಅನುಕೂಲವಾಗುತ್ತದೆ.

— ಡಾ.ಬಸವರಾಜ ಓಲೇಕಾರ ಆಡಳಿತ ವೈದ್ಯಾಧಿಕಾರಿಮಾಸೂರು ಸಮುದಾಯ ಆರೋಗ್ಯ ಕೇಂದ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net