ಸಂಪುಟ ವಿಸ್ತರಣೆಯಾದರೆ ಸಚಿವ ಸ್ಥಾನ ಸಿಗುವ ವಿಶ್ವಾಸ

ಶ್ರೀನಿವಾಸ ಮಾನೆ
ಶ್ರೀನಿವಾಸ ಮಾನೆ
Published on
ಹಾನಗಲ್ಲ: ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಎರಡು ಬಾರಿ ವಿಧಾನ ಪರಿಷತ್, ಎರಡು ಬಾರಿ ವಿಧಾನಸಭೆ ಪ್ರವೇಶಿಸಿರುವ ತಮಗೆ ಸಚಿವ ಸಂಪುಟ ವಿಸ್ತರಣೆಯಾದರೆ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಬಿಜೆಪಿ ಮುಕ್ತವಾಗಿದೆ. ಅಷ್ಟಾದರೂ ನಾವು ಸುಮ್ಮನೆ ಕೂಡುವಂತಿಲ್ಲ. ಜನರ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ. ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಕೊಟ್ಟರೆ ಸವಾಲುಗಳನ್ನು ಎದುರಿಸಿ ಮುಂಬರುವ ಚುನಾವಣೆಗೆ ಸಿದ್ಧರಾಗಲು ಅನುಕೂಲವಾಗಲಿದೆ. ಈ ಎಲ್ಲ ಅಂಶಗಳನ್ನು ಹೈಕಮಾಂಡ್ ಪರಿಗಣಿಸುವ ವಿಶ್ವಾಸವಿದೆ ಎಂದರು.
ಸಚಿವ ಸ್ಥಾನದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಹಿರಿಯ ನಾಯಕರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿದ್ದೇವೆ. ಜಿಲ್ಲೆಯ ಯಾರಿಗಾದರೂ ಸ್ಥಾನ ಸಿಕ್ಕರೂ ಸಂತೋಷವಿದೆ. ಎಲ್ಲರೂ ಒಟ್ಟಿಗೆ ಸೇರಿ ಪಕ್ಷವನ್ನು ಬಲಪಡಿಸಿ ಮುಂದಿನ ವಿಧಾನಸಭೆ ಚುನಾವಣೆಗೆ ಅಣಿಗೊಳಿಸುತ್ತೇವೆ. ಒಟ್ಟಾರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು ಎನ್ನುವುದು ಹಕ್ಕೊತ್ತಾಯವಾಗಿದೆ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net