Byadagi chillies ಬ್ಯಾಡಗಿ ಮೆಣಸಿನಕಾಯಿಗೆ ‘ಬಂಪರ್’ ಬೆಲೆ

ಬ್ಯಾಡಗಿಯ ಮೆಣಸಿನಕಾಯಿ Byadagi chillies ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳ ರಾಶಿ.
ಬ್ಯಾಡಗಿಯ ಮೆಣಸಿನಕಾಯಿ Byadagi chillies ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳ ರಾಶಿ.
Published on
ಬ್ಯಾಡಗಿ: ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ (Byadagi chillies) ಮಾರುಕಟ್ಟೆಗೆ ಪ್ರಸಕ್ತ ವರ್ಷ ಇಳುವರಿ ಕೊರತೆ ಹಾಗೂ ಹವಾಮಾನ ವೈಪರೀತ್ಯದ ಹೊಡೆತ ಬಿದ್ದಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಗೆ ಮೆಣಸಿನಕಾಯಿ ಆವಕವು ಕಳೆದ ವರ್ಷಕ್ಕಿಂತ ಕುಸಿತ ಕಂಡಿದೆ. ಆದರೆ, ಈ ಬಾರಿ ಮೆಣಸಿನಕಾಯಿಗೆ ಬಂಪರ್ ಬೆಲೆ ಸಿಕ್ಕಿರುವುದು ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ.
ಕಳೆದ ವರ್ಷ ಬೆಲೆ ಇಳಿಮುಖವಾಗಿದ್ದರಿಂದ ಮಾರುಕಟ್ಟೆ ಶುಲ್ಕದ ಗುರಿಯಾದ 28 ಕೋಟಿ ರೂ. ತಲುಪಲು ಸಾಧ್ಯವಾಗಿರಲಿಲ್ಲ. ಕೇವಲ 12.40 ಕೋಟಿ ರೂ. ಸಂಗ್ರಹವಾಗಿತ್ತು. 2025-26ನೇ ಸಾಲಿನಲ್ಲಿ 18 ಕೋಟಿ ರೂ. ಶುಲ್ಕ ಸಂಗ್ರಹದ ಗುರಿಯಿದೆ. ಮಾ. 11ರವರೆಗೆ 50 ಲಕ್ಷ ಚೀಲ ಆವಕವಾಗಿ, 15 ಕೋಟಿ ರೂ. ಸಂಗ್ರಹವಾಗಿದೆ. ಮಾ. 30ರೊಳಗಾಗಿ ಗುರಿ ಮೀರುವ ಸಾಧ್ಯತೆಯಿದೆ.
ಬ್ಯಾಡಗಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಕೋಲ್ಡ್ ಸ್ಟೋರೇಜ್​ಗಳಿದ್ದು, ಒಂದೊಂದರಲ್ಲಿ ಕನಿಷ್ಠ 1 ರಿಂದ 3 ಲಕ್ಷ ಚೀಲ ಸಂಗ್ರಹಿಸುವ ಸಾಮರ್ಥ್ಯವಿದೆ. ರೈತರು ಮತ್ತು ವ್ಯಾಪಾರಸ್ಥರು ಇಲ್ಲಿ ಮೆಣಸಿನಕಾಯಿ ಸಂಗ್ರಹಿಸಿ ವರ್ಷದ 12 ತಿಂಗಳೂ ವಹಿವಾಟು ನಡೆಸುತ್ತಿದ್ದಾರೆ. ಮಾರುಕಟ್ಟೆಯ ಒಟ್ಟಾರೆ ವಹಿವಾಟು 3 ಸಾವಿರ ಕೋಟಿ ರೂ. ತಲುಪುವ ನಿರೀಕ್ಷೆಯಿದ್ದು, ಬೆಲೆ ಏರಿಕೆಯು ವ್ಯಾಪಾರಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ದೇಶದ ಮೂಲೆ ಮೂಲೆಗಳಲ್ಲಿ ಬ್ಯಾಡಗಿ ಕಡ್ಡಿ, ಡಬ್ಬಿ ಹಾಗೂ ಗುಂಟೂರು ಮೆಣಸಿನಕಾಯಿಗೆ ಭಾರಿ ಬೇಡಿಕೆಯಿದೆ. ಬ್ಯಾಡಗಿ ಒಣಮೆಣಸು ಈಗ ಸಾಗರದಾಚೆಗೂ ತನ್ನ ವ್ಯಾಪಾರ ವಿಸ್ತರಿಸಿಕೊಂಡಿದೆ. ಪ್ರಸಿದ್ಧ ಎಂಡಿಎಚ್ ಮಸಾಲಾ ಕಂಪನಿಯಿಂದ ಹಿಡಿದು ಅನೇಕ ಸಾಂಬಾರ ಪದಾರ್ಥ ಉತ್ಪಾದನಾ ಕಂಪನಿಗಳಿಗೆ ಇಲ್ಲಿಂದ ಪ್ರತಿದಿನ ಬೃಹತ್ ಲಾರಿಗಳ ಮೂಲಕ ಮೆಣಸಿನಕಾಯಿ ಸರಬರಾಜಾಗುತ್ತಿದೆ.
"

ಬ್ಯಾಡಗಿ ಮಾರುಕಟ್ಟೆಯೊಂದಿಗೆ ನಮಗೆ ದಶಕಗಳ ನಂಟಿದೆ. ಈ ಬಾರಿ ಬೆಳೆ ಕಡಿಮೆ ಇದ್ದರೂ ಗುಣಮಟ್ಟದ ಕಾಯಿಗೆ ಬಂಪರ್ ಬೆಲೆ ಸಿಕ್ಕಿದೆ. ಕಡ್ಡಿ ಮತ್ತು ಡಬ್ಬಿ ತಳಿಗಳ ಬೆಲೆ ಸರಾಸರಿ 40 ಸಾವಿರ ರೂ. ದಾಟಿದೆ. ಇಲ್ಲಿ ಆನ್​ಲೈನ್ ಪಾವತಿ ಹಾಗೂ ಇ-ತೂಕದ ವ್ಯವಸ್ಥೆ ಚೆನ್ನಾಗಿದೆ.

| ಬಸವರೆಡ್ಡಿ, ರೈತ ರಾಯಚೂರು.

"

ಕಳೆದ ವರ್ಷ 72 ಲಕ್ಷ ಚೀಲ ವಹಿವಾಟು ನಡೆದು 12.40 ಕೋಟಿ ರೂ. ಶುಲ್ಕ ಸಂಗ್ರಹವಾಗಿತ್ತು. ಈ ಬಾರಿ ಆವಕ 50 ಲಕ್ಷ ಚೀಲಗಳಿಗೆ ಇಳಿದಿದ್ದರೂ, ಬೆಲೆ ಹೆಚ್ಚಳದಿಂದಾಗಿ ಈಗಾಗಲೇ ಶುಲ್ಕ 15 ಕೋಟಿ ರೂ. ದಾಟಿದೆ. ನಾವು 18 ಕೋಟಿ ರೂ. ಗುರಿ ತಲುಪುವ ವಿಶ್ವಾಸದಲ್ಲಿದ್ದೇವೆ. 

| ಡಾ. ಆದರ್ಶ ಡಿ.ಬಿ., ಎಪಿಎಂಸಿ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net