ಈವರೆಗೂ ನೆಲಸಮಗೊಂಡ ಕಟ್ಟಡಗಳ ಎಷ್ಟು?: ಶನಿವಾರ, ಭಾನುವಾರ, ಸೋಮವಾರ ಸೇರಿದಂತೆ ಈವರೆಗೂ 100ಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿದ್ದು, ಇನ್ನುಳಿದ ಕಟ್ಟಡಗಳನ್ನು ತೆರವುಗೊಳಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸ್ಥಳಕ್ಕಾಗಮಿಸಿದ್ದರು. ಈವರೆಗೆ ಪರಿಹಾರ ಪಡೆಯದ ಕಟ್ಟಡ, ಜಾಗಗಳ ಮಾಲೀಕರ ಮನವೊಲಿಸುವಲ್ಲಿ ಜಿಲ್ಲಾಧಿಕಾರಿ ಯಶಸ್ವಿಯಾಗಿದ್ದಾರೆ. ನಿಮಗೆ ಪರಿಹಾರ ಹಣ ತೆಗೆದಿರಿಸಿದೆ. ನೀವು ನಮ್ಮವರೇ, ಎಲ್ಲರ ಸಹಕಾರ ಅಗತ್ಯ. ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ. ನಿಮ್ಮೂರಿನ ಅಭಿವೃದ್ಧಿಗೆ ಎಲ್ಲ ಸಾರ್ವಜನಿಕರು, ಭೂಮಾಲೀಕರು, ಅ-ಕಾರಿಗಳ ತಂಡ ಕೈಜೋಡಿಸುತ್ತಿದೆ. ಕೆಲವೇ ಕೆಲವರಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನೆಡೆಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ನೀವೆಲ್ಲ ಸರ್ಕಾರದಿಂದ ಪರಿಹಾರ ಮೊತ್ತ ಪಡೆಯಿರಿ, ತೆರವಿಗೆ ಅವಕಾಶ ಮಾಡಿಕೊಡಿ ಎಂದು ಮನವೊಲಿಸಿದರು. ಪರಿಣಾಮ ಸೋಮವಾರ ಬಹುತೇಕ ಮಾಲೀಕರು ಸ್ವಯಂಪ್ರೇರಿತರಾಗಿ ಕಟ್ಟಡ ತೆರವು ಮಾಡಿಕೊಳ್ಳಲು ಮುಂದಾಗಿದ್ದಾರೆ.