ಬೈಕ್, ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ

ಪೊಲೀಸರು ವಶಪಡಿಸಿಕೊಂಡ ಬೈಕ್, ಚಿನ್ನಾಭರಣ
ಪೊಲೀಸರು ವಶಪಡಿಸಿಕೊಂಡ ಬೈಕ್, ಚಿನ್ನಾಭರಣ
Published on

ರಾಣೆಬೆನ್ನೂರ: ಕದ್ದ ಬೈಕ್ನಲ್ಲಿ ಓಡಾಡುತ್ತಿದ್ದ ಒಬ್ಬರು ಖದೀಮರನ್ನು ಬಂಧಿಸಿ, ಅವರಿಂದ 3.84 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮೂರು ಬೈಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿಯ ಶಹರ ಠಾಣೆ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ.

ನಗರದ ದೊಡ್ಡಪೇಟೆ ದರ್ಗಾ ಮಸೀದಿ ಸಮೀಪದ ಗವಾರದವರ ಓಣಿ ನಿವಾಸಿ ಮುಬಾರಕ್ (ಮೋಟಿಯಾ) ಹುಸೇನ್ ಬ್ಯಾಡಗಿ (23) ಹಾಗೂ ಇಸ್ಲಾಂಪುರ ಓಣಿಯ ಮಹ್ಮದ್ ಕಲಂದರ (ಜಪಟ್ಟಿ ಶಾಹಿಲ್) ಹುಸೇನಸಾಬ ಹಾವೇರಿ (22) ಬಂಧಿತ ಆರೋಪಿತರು.

ಇವರ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ಮೋಜು ಮಸ್ತಿಗಾಗಿ ಬೈಕ್ ಹಾಗೂ ಮನೆ ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಈ ಹಿಂದೆ 18 ಕಳ್ಳತನ ಪ್ರಕರಣ ಕೂಡ ದಾಖಲಾಗಿದ್ದವು. ಕಳೆದ ವಾರ ಬೈಕ್ ಕಳ್ಳತನ ಆರೋಪದಡಿ ಬಂಕಾಪುರ, ಹಾವೇರಿ, ರಾಣೆಬೆನ್ನೂರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

ಬುಧವಾರ ರಾತ್ರಿ ಇಬ್ಬರು ಬಂಕಾಪುರದಲ್ಲಿ ಕಳ್ಳತನ ಮಾಡಿದ್ದ ಸ್ಕೂಟಿ ಮೇಲೆ ನಗರದಲ್ಲಿ ಓಡಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಚಿನ್ನಾಭರಣ ಹಾಗೂ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಹಾಗೂ ಡಿವೈಎಸ್ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ಶಹರ ಠಾಣೆ ಸಿಪಿಐ ವೆಂಕಟೇಶ ಎನ್., ಪಿಎಸ್ಐ ಎಚ್.ಎನ್. ದೊಡ್ಡಮನಿ, ಸಿಬ್ಬಂದಿಯಾದ ಎಲ್.ಬಿ. ಕರಿಗಾರ, ಪಿ.ಕೆ. ಸನದಿ, ಪಿ.ಕೆ. ಲಮಾಣಿ, ಮಂಜುನಾಥ ರೊಟ್ಟಿಯವರ, ಎಚ್.ಎಲ್. ದನುವಿನಮನಿ, ಎಚ್.ಟಿ. ನಗಾವತ್, ಶ್ರೀಕಾಂತ ಕೊರವರ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net