ಶಿಶುನಾಳ ಶರೀರ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರಾಮು ತಳವಾರ, ಎಸ್.ಎಸ್. ಭರಮಣ್ಣನವರ, ಬಸವರಾಜ ಗೊಬ್ಬಿ ಇತರರಿದ್ದರು.
ಶಿಗ್ಗಾಂವಿ: ಮುಂಬರುವ ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲಿ ಶಿಶುನಾಳ ಶರೀರ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮು ತಳವಾರ ಮಾತನಾಡಿ, ಕರ್ನಾಟಕದ ಕಬೀರ ಎಂದೇ ಖ್ಯಾತಿ ಪಡೆದ ಹಾಗೂ ತತ್ವಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಸಂತ ಶಿಶುವಿನಹಾಳ ಶರೀರ ಹೆಸರಿನಿಂದ ಪ್ರಾಧಿಕಾರ ರಚಿಸುವಂತೆ ಈ ಭಾಗದ ಕನ್ನಡಪರ ಸಂಘಟನೆ ಹಾಗೂ ಸಾರ್ವಜನಿಕರು ವಿವಿಧ ಸಂಘ-ಸಂಸ್ಥೆಗಳು ಈ ಬಗ್ಗೆ ಹಲವು ದಶಕಗಳಿಂದ ಒತ್ತಾಯಿಸುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬರುವ ಬಜೆಟ್ ಮಂಡನೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರಾಧಿಕಾರ ಘೋಷಣೆ ಮಾಡದಿದ್ದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನಿವಾಸದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಜನಪದ ಅಕಾಡೆಮಿಯ ಮಾಜಿ ಸದಸ್ಯ ಬಸವರಾಜ ಗೊಬ್ಬಿ ಮಾತನಾಡಿ, ಈ ಹಿಂದಿನ ಸರ್ಕಾರ ಶರೀಗಿರಿಯನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡಿದರೂ ಪ್ರಾಧಿಕಾರ ರಚನೆ ಸಾಧ್ಯವಾಗಲಿಲ್ಲ. ಇಲ್ಲಿ ಪ್ರಾಧಿಕಾರ ಸ್ಥಾಪನೆಯಿಂದ ಶರೀರ ತತ್ವ ಸಿದ್ಧಾಂತಗಳನ್ನು ಹಲವಾರು ಭಾಷೆಗಳಲ್ಲಿ ಪ್ರಕಟಿಸಲು ಹಾಗೂ ಭಾವೈಕ್ಯ ಮನೋಭಾವನೆ ಮತ್ತಷ್ಟು ಪ್ರಸಾರ ಮಾಡಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರಾಧಿಕಾರ ಘೋಷಿಸುವಂತೆ ಒತ್ತಾಯಿಸಿದರು.
ಶಿರಸ್ತೇದಾರ ವಿಶ್ವನಾಥ ಟಿಟ್ತಿ ಮನವಿ ಸ್ವೀಕರಿಸಿ ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್. ಭರಮಣ್ಣನವರ, ಎಸ್.ಎಸ್. ತಳವಾರ, ಜಗದೀಶ ಜಕ್ಕಣ್ಣನವರ, ಯಲ್ಲಪ್ಪ ತೀರ್ಥ, ಬಸವಣ್ಣೆಯ್ಯ ಪೂಜಾರ, ಪಕ್ಕೀರಪ್ಪ ವಾಲ್ಮೀಕಿ, ನಜೀರಗೌಡ್ರು ಅಲ್ಲಿಗೌಡ್ರ, ಹುಸೇನಸಾಬ ವಾಲೀಕಾರ, ಬಸವಣ್ಣೆಯ್ಯ ಹಿರೇಮಠ, ಬಸನಗೌಡ ಹುಡೇದ ಸೇರಿದಂತೆ ಇತರರಿದ್ದರು.