irrigation: ನೀರಾವರಿ ಯೋಜನೆಗೆ ಮತ್ತೆ ವಿಘ್ನ!

ಹಾನಗಲ್ಲ ಆನೆಕೆರೆ ಏರಿಯ ಮೇಲೆ ನಡೆದಿರುವ ಪೈಪ್‌ಲೈನ್ ಕಾಮಗಾರಿಯನ್ನು ತಡೆದು ರೈತರು ಶನಿವಾರ ಪ್ರತಿಭಟನೆ ನಡೆಸಿದರು. ಬಾಲಕೃಷ್ಣ ಸಿಂಧೆ, ಶರಶ್ಚಂದ್ರ ದೇಸಾಯಿ, ಬಾಳಾರಾಮ್ ಗುರ್ಲಹೊಸೂರ, ಜಾಫರಸಾಬ್ ಕೇಣಿ, ಸಿದ್ದರಾಮಗೌಡ ಪಾಟೀಲ ಇತರರಿದ್ದರು.
ಹಾನಗಲ್ಲ ಆನೆಕೆರೆ ಏರಿಯ ಮೇಲೆ ನಡೆದಿರುವ ಪೈಪ್‌ಲೈನ್ ಕಾಮಗಾರಿಯನ್ನು ತಡೆದು ರೈತರು ಶನಿವಾರ ಪ್ರತಿಭಟನೆ ನಡೆಸಿದರು. ಬಾಲಕೃಷ್ಣ ಸಿಂಧೆ, ಶರಶ್ಚಂದ್ರ ದೇಸಾಯಿ, ಬಾಳಾರಾಮ್ ಗುರ್ಲಹೊಸೂರ, ಜಾಫರಸಾಬ್ ಕೇಣಿ, ಸಿದ್ದರಾಮಗೌಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆನೆಕೆರೆ ಏರಿ ಮೇಲೆ ಪೈಪ್‌ಲೈನ್ ವಿರೋಧಿಸಿ ರೈತರ ಪ್ರತಿಭಟನೆ
  • ಕಾಮಗಾರಿ ಸ್ಥಗಿತ, ಉಸ್ತುವಾರಿ ತರಾಟೆಗೆ
  • ಅಮೃತ್ ಯೋಜನೆಯಡಿ 35 ಕೋಟಿ ರೂ. ವೆಚ್ಚದ ಕಾಮಗಾರಿ
ಹಾನಗಲ್ಲ: ಧರ್ಮಾ ಜಲಾಶಯದಿಂದ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ (irrigation) ಅಮೃತ್ ಯೋಜನೆಯಡಿ 35 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೊಂದು ವಿಘ್ನ ಎದುರಾಗಿದೆ.
ಕಾಮಗಾರಿ ನಿಮಿತ್ತ ಶನಿವಾರ ಸ್ಥಳಕ್ಕೆ ಆಗಮಿಸಿದ ಕಾರ್ಮಿಕರ ತಂಡ ಆನೆಕೆರೆ ಏರಿಯನ್ನು ಸೀಳಿ ಪೈಪ್‌ಲೈನ್ ಹಾಕುವ ಕಾರ್ಯ ಕೈಗೆತ್ತಿಕೊಂಡಿತ್ತು. ಕೂಡಲೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ರೈತರು, ‘ಮಾಡುವುದಾದರೆ ವೈಜ್ಞಾನಿಕವಾಗಿ ಕಾಮಗಾರಿ ಮಾಡಿ. ಅದನ್ನುಬಿಟ್ಟು ತಾತ್ಕಾಲಿಕವಾಗಿ ಕೆಲಸ ಮುಗಿಸುವ ಭರದಲ್ಲಿ ಮುಂಂದೆ ದೊಡ್ಡ ಅನಾಹುತಕ್ಕೆ ಆಸ್ಪದ ಕೊಡಬೇಡಿ. ಪೂರ್ವಾಪರ ಚರ್ಚಿಸಿ ಕೆಲಸ ಮಾಡಿ’ ಎಂದು ಆಗ್ರಹಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದರು.
ವಿರೋಧ ಯಾಕೆ..?
ಅಂದಾಜು ಎರಡು ಕಿಮೀ ಉದ್ದವಿರುವ ಆನೆಕರೆಯ ಏರಿಯನ್ನು ಸೀಳಿ ಅಂದರೆ ಏರಿಯ ಮಧ್ಯಭಾಗದಲ್ಲಿ 6 ಅಡಿ ಆಳ ತೆಗ್ಗು ತೆಗೆದು ಪೈಪ್‌ಲೈನ್ ಹಾಕಿದರೆ ಮಳೆಗಾಲದಲ್ಲಿ ಇಡೀ ಏರಿ ಹಾಳಾಗುತ್ತದೆ. 119 ಎಕರೆ ಕ್ಷೇತ್ರದಲ್ಲಿರುವ ಕೆರೆಯ ನೀರಿನ ಸಾಮರ್ಥ್ಯದ ಒತ್ತಡಕ್ಕೆ ಒಡೆಯವುದು ಖಚಿತ. ಇದರಿಂದ ಕೆರೆಯೂ ಹಾಳಾಗುತ್ತದೆ. ಜತೆಗೆ 200 ಎಕರೆ ತೋಟಗಾರಿಕೆ ಹಾಗೂ ಕೃಷಿ ಜಮೀನು ಕೊಚ್ಚಿಹೋಗುವ ಆತಂಕ ಇದೆ. ಈ ರೀತಿ ಪೈಪ್‌ಲೈನ್ ಕಾರ್ಯ ಕೈಗೆತ್ತಿಕೊಳ್ಳುವ ಮೊದಲು ಯಾವುದೇ ವೈಜ್ಞಾನಿಕ ಲೆಕ್ಕಾಚಾರಗಳನ್ನು ಹಾಕಿಲ್ಲ. ನೀರಾವರಿ ಇಲಾಖೆಯ ಅನುಮತಿಯೂ ಪಡೆದಿಲ್ಲ. ಸ್ಥಳೀಯ ರೈತರು, ಪುರಸಭೆ, ನೀರಾವರಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯೂ ನಡೆಸಿಲ್ಲ. ಯಾವ ಚರ್ಚೆಯೂ ಮಾಡದೇ ಏಕಾಏಕಿ ತಮ್ಮಿಷ್ಟದಂತೆ ಕೆರೆಯ ಏರಿಯನ್ನು ಸೀಳಿದರೆ ಮುಂದೆ ದೊಡ್ಡ ಅನಾಹುತವಾದರೆ ಯಾರು ಹೊಣೆ? ಎಂದು ರೈತರು ಕಾಮಗಾರಿ ಉಸ್ತುವಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆನೆಕೆರೆಯ ಪಶ್ಚಿಮ ಭಾಗದಿಂದ ಅರಂಭವಾದ ಪೈಪ್‌ಲೈನ್ ಅವಳವಡಿಸುವ ಕಾಮಗಾರಿಯನ್ನು ಸ್ಥಗಿಗೊಳಿಸಿ ಪ್ರತಿಭಟನೆ ನಡೆಸಿದ ರೈತರು, ಕೂಡಲೇ ಕಾಮಗಾರಿ ನಿಲ್ಲಿಸಬೇಕು. ಇದಕ್ಕಾಗಿ ರೈತರು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಬೇಕು. ಇಂತಹ ಅವೈಜ್ಞಾನಿಕ ಕಾಮಗಾರಿಗೆ ಸಲಹೆ ನೀಡಿದ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು. ಈಗಾಗಲೇ ಆನೆಕೆರೆ ಏರಿ ಮೇಲೆ ಪೈಪ್‌ಲೈನ್ ಕಾಮಗಾರಿ ಮಾಡಿರುವುದನ್ನು ತೆರವುಗೊಳಿಸಿ, ಈ ಏರಿಯನ್ನು ಸಂಪರ್ಣವಾಗಿ ಗಟ್ಟಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿ ಮಂಜುನಾಥ ಬಡಿಗೇರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಲಕೃಷ್ಣ ಸಿಂಧೆ, ಶರಶ್ಚಂದ್ರ ದೇಸಾಯಿ, ಬಾಳಾರಾಮ್ ಗುರ್ಲಹೊಸೂರ, ಜಾಫರಸಾಬ್ ಕೇಣಿ, ಸಿದ್ದರಾಮಗೌಡ ಪಾಟೀಲ, ಬಾಳಕೃಷ್ಣ ಶಿಂಧೆ, ಶಿವಯೋಗಿ ಅರಳೆಲೆಮಠ, ರಾಜು ಗೌಳಿ, ಮುಜಾಫರ್ ನಾಶೀಪುಡಿ, ನಾಗೇಂದ್ರ ಬಂಕಾಪೂರ, ಮಂಜುನಾಥ ನಾಗಜ್ಜನವರ, ಗಣೇಶ ಮೂಡ್ಲಿಯವರ, ಸಂತೋಷ ಟೀಕೋಜಿ ಇತರರು ಇದ್ದರು.

ಯಾವ ಪರವಾನಗಿಯೂ ಇಲ್ಲ

ನೀರಾವರಿ ಇಲಾಖೆಯಿಂದ ಆನೆಕೆರೆ ಏರಿಯನ್ನು ಕೊರೆದು ಪೈಪ್‌ಲೈನ್ ಅಳವಡಿಕೆಗೆ ಯಾವುದೇ ಪರವಾನಗಿ ನೀಡಿಲ್ಲ. ಈ ಬಗ್ಗೆ ಯಾವುದೇ ಚರ್ಚೆಯೂ ಆಗಿಲ್ಲ. ಆದರೆ, ಏರಿಯನ್ನು ಸೀಳದೆ ಏರಿಯ ದಡದಲ್ಲಿ ಅಲ್ಲಲ್ಲಿ ಪಿಲ್ಲರ್ ಹಾಕಿ ಏರಿಗೆ ಧಕ್ಕೆಯಾಗದಂತೆ ಒಯ್ಯಬಹುದು ಎಂಬ ಚರ್ಚೆಯಾಗಿತ್ತು. ಆದರೆ, ಇದಾವುದನ್ನು ಗಮನಿಸದೇ ಕಾಮಗಾರಿ ಆರಂಭ ಮಾಡಿರುವುದನ್ನು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ರಸ್ತೆ ಅಗೆಯುವುದು ಬೇಡ

ಹಾನಗಲ್ಲ ಪಟ್ಟಣದ ಮಾರ್ಕೆಟ್ ರಸ್ತೆಯನ್ನು ಹತ್ತು ವರ್ಷಗಳ ಹಿಂದೆ ಅತ್ಯುತ್ತಮ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈಗ ಇದೇ ರಸ್ತೆಯನ್ನು ಸೀಳಿ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಹಾಕುವ ಕಾಮಗಾರಿ ಯೋಜನೆಯಲ್ಲಿದೆ. ಇದರಿಂದಾಗಿ ಹಾಳಾಗುವ ರಸ್ತೆಯನ್ನು ಪುನರ್ ನಿರ್ಮಾಣ ಮಾಡುವುದು ಇಲಾಖೆಯಿಂದ ಸಾಧ್ಯವಿಲ್ಲ. ರಸ್ತೆ ಪೂರ್ಣ ಹಾಳಾಗುತ್ತದೆ. ಆದ್ದರಿಂದ ಊರಿನ ಹೊರವಲಯದಿಂದ ಈ ಪೈಪ್‌ಲೈನ್ ಹಾಕುವ ಕೆಲಸವಾಗಬೇಕು ಎಂದು ಶರಶ್ಚಂದ್ರ ದೇಸಾಯಿ ಒತ್ತಾಯಿಸಿದರು. ಈವರೆಗೆ ಈ ಕಾಮಗಾರಿಯ ಬಗ್ಗೆ ಜನರಿಗೆ ಅಂದಾಜು ಇರಲಿಲ್ಲ. ಈಗ ಕಾಮಗಾರಿ ಆರಂಭವಾಗಿರುವುದರಿಂದ ಇದರ ಗಂಭೀರತೆ ಸಾರ್ವಜನಿಕರಿಗೆ ತಿಳಿಯುತ್ತಿದೆ. ಕೂಡಲೇ ಕಾಮಗಾರಿ ಮಾರ್ಗವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net