ಸೌಹಾರ್ದ ಸಮಾಜವೇ ಪಂಚಪೀಠ ಗುರಿ

ನೆಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ದಿವ್ಯಜ್ಯೋತಿ ಗ್ರಂಥ ಬಿಡುಗಡೆಗೊಳಿಸಲಾಯಿತು. ಪಂಚ ಪೀಠಾಧೀಶ್ವರರು, ರುದ್ರಪ್ಪ ಲಮಾಣಿ, ಬಸವರಾಜ ಬೊಮ್ಮಾಯಿ, ಎಂ.ಎಂ. ಹಿರೇಮಠ ಇತರರಿದ್ದರು.
ನೆಗಳೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದಲ್ಲಿ ದಿವ್ಯಜ್ಯೋತಿ ಗ್ರಂಥ ಬಿಡುಗಡೆಗೊಳಿಸಲಾಯಿತು. ಪಂಚ ಪೀಠಾಧೀಶ್ವರರು, ರುದ್ರಪ್ಪ ಲಮಾಣಿ, ಬಸವರಾಜ ಬೊಮ್ಮಾಯಿ, ಎಂ.ಎಂ. ಹಿರೇಮಠ ಇತರರಿದ್ದರು.
Published on
ಗುತ್ತಲ: ಜೀವನ ಸಮೃದ್ಧಿಗೆ ಮತ್ತು ಶಾಂತಿಗೆ ದೈವೀ ಗುಣಗಳ ಅವಶ್ಯಕತೆಯಿದೆ. ದೈವೀ ಗುಣಗಳು ಪ್ರಾಬಲ್ಯಗೊಂಡರೆ ಅಸುರಿ ಗುಣಗಳು ನಾಶವಾಗುತ್ತವೆ. ಸಮಾಜದಲ್ಲಿ ಸಂಘಟನೆಗಳು ನಡೆಯಲಿ. ಆದರೆ, ಸಂಘರ್ಷಗಳು ನಡೆಯಬಾರದು. ಸೌಹಾರ್ದಯುತ ಸಮಾಜ ನಿರ್ಮಾಣವೇ ಪಂಚಪೀಠಗಳ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸಮೀಪದ ನೆಗಳೂರಿನಲ್ಲಿ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ, ನೂತನ ರಥದ ಲೋಕಾರ್ಪಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಗದ್ಗುರು ರೇಣುಕಾದಿ ಪಂಚ ಆಚಾರ್ಯರಿಂದ ಸ್ಥಾಪಿತಗೊಂಡ ಪಂಚಪೀಠಗಳು ಯಾವಾಗಲೂ ಧರ್ಮಮುಖಿಯಾಗಿ ಮತ್ತು ಸಮಾಜಮುಖಿಯಾಗಿ ಕಾರ್ಯ ಮಾಡುತ್ತಾ ಬಂದಿವೆ. ಜಾತಿ-ಮತ- ಪಂಥಗಳ ಗಡಿ ಮೀರಿ ಭಾವೈಕ್ಯತೆ, ಸಾಮರಸ್ಯ ಬದುಕಿಗೆ ಮಹತ್ವ ಕೊಟ್ಟು ಮಾರ್ಗದರ್ಶನ ನೀಡುತ್ತಿವೆ. ಅಸುರಿ ಗುಣಗಳ ಕಸಕಡ್ಡಿ ಕಿತ್ತು ಹಾಕಿ, ಮುಳ್ಳು ಕಲ್ಲು ಸ್ವಚ್ಛಗೊಳಿಸಬೇಕು. ಪರಿಶುದ್ಧವಾದ ಮನದಂಗಳದಲ್ಲಿ ಮಹದೇವ ನೆಲೆ ನಿಂತು ಹರಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶಗಳು ಸರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.
ಉಜ್ಜಯಿನಿ ಶ್ರೀ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ವಿದ್ಯೆ, ಬುದ್ಧಿ ಕೊಟ್ಟವನು ಭಗವಂತ. ಹೃದಯ, ಹೊಟ್ಟೆ ಕೊಟ್ಟವನು ಭಗವಂತ. ಅನ್ನ, ನೀರು, ಗಾಳಿ, ಬೆಳಕು ಕೊಟ್ಟವನು ಪರಮಾತ್ಮ. ಅರಿವು ಆಚರಣೆಗೆ ಗುರು ಬೋಧಾಮೃತ ಅವಶ್ಯ ಎಂದರು. 
ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಆಶೀರ್ವಚನ ನೀಡಿ, ಭೌತಿಕ ಸಿರಿ-ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮ ಜ್ಞಾನ ಸಂಪತ್ತು ನಿಜವಾದ ಸಂಪತ್ತು. ಜನ ಆದರ್ಶಗಳನ್ನು ಮರೆತು ಅಶಾಂತಿ ಬದುಕಿಗೆ ಕಾರಣರಾಗುತ್ತಿದ್ದಾರೆ. ಅಧಿಕಾರ-ಅಂತಸ್ತು ದೊರೆತಾಗ ವಿನೀತರಾಗಿ ಬಾಳಿ ಬದುಕಬೇಕು ಎಂದರು.
ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ಆಶೀರ್ವಚನ ನೀಡಿ, ಭಗವಂತನನ್ನು ಬಿಟ್ಟು ಭಕ್ತನಿರಲು ಸಾಧ್ಯವಾಗದು. ಅನುಭವ, ಆದರ್ಶವಿಲ್ಲದ ಬುದ್ಧಿಗೆ ಬೆಲೆ, ನೆಮ್ಮದಿ ಸಿಗುವುದಿಲ್ಲ. ಕಡಲ ಬಿಟ್ಟು ಅಲೆ ಹೇಗಿಲ್ಲವೋ ಹಾಗೆಯೇ ಭಕ್ತನನ್ನು ಬಿಟ್ಟು ಭಗವಂತನಿಲ್ಲ ಎಂದರು. 
ಕಾಶಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಮಾತನಾಡಿ, ಪ್ರತಿಯೊಬ್ಬರಲ್ಲಿ ದೇವರನ್ನು ಅರಿಯುವ ಅದ್ಭುತ ಶಕ್ತಿಯಿದೆ. ಆದರೆ, ಚಂಚಲವಾದ ಮನಸನ್ನು ಭಗವಂತನಲ್ಲಿಟ್ಟು ನಡೆದುಕೊಂಡಾಗ ಮಾತ್ರ ಸಾಧ್ಯ. ಮರೆಯುವುದು ಮನುಷ್ಯನ ಸಹಜ ಗುಣ. ನೆನಪು ಮಾಡಿಕೊಡುವುದು ಗುರುಧರ್ಮ. ನೆಗಳೂರಿನ ಭಕ್ತರು ಮಾಡಿದ ಕಾರ್ಯ ಬಹು ದೊಡ್ಡದು ಎಂದರು.
ನೆಗಳೂರು ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಗವಂತನ ಧ್ಯಾನ-ಜ್ಞಾನದೊಂದಿಗೆ ನಾವಿದ್ದಾಗ ನಮಗೆ ನೆಲೆ-ಬೆಲೆ. ಪರಮ ಗುರುವಿನ ದರ್ಶನಾಶೀರ್ವಾದದಿಂದ ತಾವೆಲ್ಲ ಪಾವನರಾಗಿದ್ದೀರಿ. ಗುರುವಿನ ಆಶೀರ್ವಾಣಿ ಆಲಿಸಿ ಆ ದಾರಿಯಲ್ಲಿ ನಡೆದಾಗ ಜೀವನ ಸಾರ್ಥಕಗೊಳ್ಳುವುದು ಎಂದರು. 
ಸಮಾರಂಭದಲ್ಲಿ ಹಲವಾರು ಮಠಾಧೀಶರು ಮತ್ತು ಗಣ್ಯರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶೀ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ನೂತನವಾಗಿ ನಿರ್ಮಾಣಗೊಂಡ ನೆಗಳೂರು ಹಿರೇಮಠದ ಕರ್ತೃ ಗುರುಶಾಂತೇಶ್ವರರ ಭವ್ಯ ರಥವನ್ನು ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರು ಲೋಕಾರ್ಪಣೆಗೊಳಿಸಿದರು. ನೆರೆದ ಸಕಲ ಸದ್ಭಕ್ತರು ಅತ್ಯಂತ ಭಕ್ತಿ ಭಾವನೆಯಿಂದ ತೇರನ್ನು ಎಳೆದ ದೃಶ್ಯ ಅಪೂರ್ವವಾಗಿತ್ತು. ನಿರಂತರ ಅನ್ನ ದಾಸೋಹ ಜರುಗಿತು. ನೆಗಳೂರ ಹಿರೇಮಠದ ದಿವ್ಯಜ್ಯೋತಿ ಗ್ರಂಥ ಬಿಡುಗಡೆಗೊಳಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಸಿ.ಎಚ್. ಬಾಳನಗೌಡ್ರ, ಉಪಸ್ಥಿತರಿದ್ದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net