ಗುತ್ತಲ: ಅಕ್ರಮ ಮರಳು ಅಡ್ಡೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, 1.20 ಲಕ್ಷ ರೂ. ಬೆಲೆಯ 2 ಕಬ್ಬಿಣದ ತೆಪ್ಪ ಹಾಗೂ 68 ಸಾವಿರ ರೂ. ಮೌಲ್ಯದ 80 ಟನ್ ಮರಳನ್ನು (sand, rafts seized) ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ.
ಹರಳಹಳ್ಳಿ ಗ್ರಾಮದ ತುಂಗಭದ್ರಾ ನದಿಯ ಪಕ್ಕದ ಜಮೀನೊಂದರಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಕುರಿತು ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಡಾ. ಶಬ್ಬೀರ್ಅಹ್ಮದ ದಿಡಗೂರ ತಂಡ ದಾಳಿ ಮಾಡಿತು.
ಅಕ್ರಮದಲ್ಲಿ ತೊಡಗಿದ್ದವರು ಅಲ್ಲಿಂದ ಪರಾರಿಯಾಗಿದ್ದು, ದಾಳಿ ವೇಳೆ 2 ಕಬ್ಬಿಣದ ತೆಪ್ಪ ಹಾಗೂ 80 ಟನ್ ಮರಳನ್ನು ವಶಪಡಿಸಿಕೊಂಡು ಹರಳಹಳ್ಳಿಯ ಮಾರುತಿ ಆಂಜನಪ್ಪ ಕೋಟೆಪ್ಪನವರ ವಿರುದ್ಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.