

ಹಾವೇರಿ: ಸಾಲ ಮಾಡಿ ಬೆಳೆದ ಬೆಲೆ ಫಲಕೊಡದ ಹಿನ್ನಲೆ ಮನನೊಂದ ಯುವ ರೈತನೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಳ್ಳಾಳ ಗ್ರಾಮದಲ್ಲಿ ನಡೆದಿದೆ.
ಸಾಲದ ಹೊರಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಯುವ ರೈತನನ್ನು ಈಶ್ವರಗೌಡ ಪಕ್ಕೀರಗೌಡ ದೊಡ್ಡಗೌಡ್ರ (29) ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಈ ಮೃತ ಈಶ್ವರಗೌಡ ನಾಲ್ಕು ಎಕರೆ ಕೃಷಿ ಜಮೀನು ಹೊಂದಿದ್ದು, ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ.
ಹೀಗಾಗಿ ಕೃಷಿ ಚಟುವಟಿಕೆಗಳಿಗಾಗಿ ವಿವಿಧೆಡೆ ಸಾಲ ಮಾಡಿದ್ದರು. ಆದರೆ ಸಾಲ ಮಾಡಿ ಬೆಳೆದ ಮೆಕ್ಕೆಜೋಳ ನೀರಿಕ್ಷಿತ ಫಲ ನೀಡಲಿಲ್ಲ, ಹೀಗಾಗಿ ಇವರಿಗೆ ಭಾರಿ ನಷ್ಟವಾಗಿದೆ. ಬೆಳೆ ಬಾರದ ಹಿನ್ನಲೆ, ಪಡೆದುಕೊಂಡಿದ್ದ ಸಾಲ ಮರುಪಾವತಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ, ಕೆವಿಜಿ ಬ್ಯಾಂಕ್‌ನಲ್ಲಿ 3 ಲಕ್ಷ ರೂ., ಸಹಕಾರಿ ಬ್ಯಾಂಕ್‌ನಲ್ಲಿ 1.20 ಲಕ್ಷ ರೂ. ಸಾಲ ಮಾಡಿದ್ದರು. ಅಲ್ಲದೆ, ತಾವು ವಾಸವಿದ್ದ ಮನೆಯ ಮೇಲೂ ಸುಮಾರು 8 ಲಕ್ಷ ರೂ. ಸಾಲ ಹೊಂದಿದ್ದರು. ಒಟ್ಟಾರೆ 15 ಲಕ್ಷಕ್ಕೂ ಅಧಿಕ ಸಾಲದ ಹೊರೆ ಈ ಈಶ್ವರಗೌಡನ ಮೇಲಿತ್ತು. ಕೊನೆಗೆ ಸಾಲ ತೀರಿಸಲು ಬೇರೆ ದಾರಿ ಕಾಣದೇ ಆತ್ಮಹತ್ಯೆಗೆ ಇವರು ಶರಣಾಗಿದ್ದಾರೆ. ಇಂದು (ಶುಕ್ರವಾರ,ನ.6) ಬೆಳಗ್ಗೆ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.