ಜಿಪಂ ಸಭಾಂಗಣದ ಮೆಟ್ಟಿಲಿನಿಂದ ಉರುಳಿ ಬಿದ್ದು ಪಿಡಿಒ ಗಾಯ; ಸಿಗದ ತುರ್ತು ಚಿಕಿತ್ಸೆ, ಪಿಡಿಒಗೆ ಹೊಲಿಗೆ

Published on

ಹಾವೇರಿ: ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಂದ ಜಿಲ್ಲೆಯ ಲೋಕಾಯುಕ್ತ ಇಲಾಖೆಯ ಬಾಕಿ ದೂರುಗಳ ವಿಚಾರಣೆ ಸಮಾರಂಭದ ಬಿಡುವಿನ ವೇಳೆ ಜಿಪಂ ಸಭಾಂಗಣದ ಮೆಟ್ಟಿಲಿನಿಂದ ಪಿಡಿಒ ಒಬ್ಬರು ಉರುಳಿ ಬಿದ್ದು, ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಶಿಗ್ಗಾಂವಿ ತಾಲೂಕಿನ ಕ್ಯಾಲಕೊಂಡ ಗ್ರಾಮದ ಪಿಡಿಒ ಮಹಾಂತೇಶ ಮರಿಯಮ್ಮನವರ ಗಾಯಗೊಂಡವರು. ಮಧ್ಯಾಹ್ನ ಊಟದ ನಂತರ ಸಭಾಂಗಣದ ಮೆಟ್ಟಿಲು ಇಳಿಯುವಾಗ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ. ಹಣೆಗೆ ತೀವ್ರವಾದ ಗಾಯವಾಗಿ ತೀವ್ರ ರಕ್ತಸ್ರಾವ ಆಗುತ್ತಿತ್ತು. ಆದರೆ ಯಾರೊಬ್ಬರೂ ಅವರನ್ನು ಮುಟ್ಟಲು ಮುಂದಾಗಲಿಲ್ಲ. ಆಗ ಮಾಧ್ಯಮ ಪ್ರತಿನಿಧಿಗಳು ಅವರನ್ನು ಸಮಾಧಾನಪಡಿಸಿ ಕಾರೊಂದನ್ನು ತರಿಸಿದರು. ಆಗ ಇತರರು ಸಹಾಯಕ್ಕೆ ಮುಂದಾದರು. ನಂತರ ಅವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.

ಆಂಬುಲೆನ್ಸ್ ಇರಲಿಲ್ಲ

ಹಾವೇರಿ ನಗರದಿಂದ 8 ಕಿಮೀ ದೂರದಲ್ಲಿರುವ ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯಿತಿ ಆವರಣದಲ್ಲಿ ದೊಡ್ಡ ಸಭೆ, ಸಮಾರಂಭದ ವೇಳೆ ಆಂಬುಲೆನ್ಸ್ ಸೇವೆ ಇದ್ದಿದ್ದರೆ ಇಂತಹ ಪರಿಸ್ಥಿತಿಯನ್ನು ವೇಗವಾಗಿ ನಿಭಾಯಿಸಬಹುದಿತ್ತು. ತುರ್ತು ಸೇವೆಗೆ ಯಾರೂ ಲಭ್ಯವಾಗದಿರುವುದು ಕಂಡುಬಂತು.

ಕೋಟ್

ಎರಡೂ ಕಣ್ಣಿನ ಮಧ್ಯೆ ಆಗಿದ್ದ ಗಾಯಕ್ಕೆ ಮೂರು ಹೊಲಿಗೆ ಹಾಕಿದ್ದಾರೆ. ಎಕ್ಸರೇ ಮತ್ತು ಸಿಟಿ ಸ್ಕ್ಯಾನ್ ಮಾಡಿದ್ದಾರೆ, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಜಿಪಂ ಸಿಇಒ ಅಕ್ಷಯ ಶ್ರೀಧರ ಅವರು ಆಗಮಿಸಿ ಮಹಾಂತೇಶನಿಗೆ ಧೈರ್ಯ ಹೇಳಿದ್ದಾರೆ. ಉತ್ತಮ ಚಿಕಿತ್ಸೆಗೂ ಸೂಚಿಸಿದ್ದಾರೆ.

- ನೀಲಪ್ಪ ದೇವಸೂರ, ಗಾಯಾಳುವಿನ ಸಂಬಂಧಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net