ತಪ್ಪದೇ ಶಾಲೆಗೆ ಹಾಜರಾಗಿ, ಭವಿಷ್ಯ ರೂಪಿಸಿಕೊಳ್ಳಿ; ಜಿಪಂ ಉಪಕಾರ್ಯದರ್ಶಿ ಕಿವಿಮಾತು

31 Ijari Lakamapura
Published on

ಹಾವೇರಿ: ವಿದ್ಯಾರ್ಥಿಗಳು ತಪ್ಪದೇ ಶಾಲೆಗೆ ಆಗಮಿಸುವ ಮೂಲಕ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಉನ್ನತ ವ್ಯಾಸಂಗ ಮಾಡಬೇಕು ಹಾಗೂ ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಂಗಸ್ವಾಮಿ ಕಿವಿಮಾತು ಹೇಳಿದರು.

ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶುಕ್ರವಾರ ಇಜಾರಿಲಕಮಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಾವೇರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.3ರಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಡಾ.ರಂಗಸ್ವಾಮಿ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು. ಶಾಲೆಗಳನ್ನು ತೋರಣ ಹಾಗೂ ಬಲೂನ್‌ಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳಿಗೆ ಊಟಕ್ಕೆ ಹೊಳಿಗೆ ಹಾಗೂ ಮಾವಿನ ಹಣ್ಣಿನ ಶೀಕರಣಿ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ, ಅಪರ ತಹಸೀಲ್ದಾರ್ ಅಮೃತಗೌಡ ಪಾಟೀಲ, ಶಿಕ್ಷಕರು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net