ಶ್ರದ್ಧೆಯಿಂದ ಸಂಕಲ್ಪ ಮಾಡಿ ರ್ಯಾಂಕ್ ಗಳಿಸಿ; ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎಂಆರ್‌ಎಂ ರಾವ್ ಕಿವಿಮಾತು

18 HVR 1
Published on

ಹಾವೇರಿ: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಾನು ರ‌್ಯಾಂಕ್ ಪಡೆದುಕೊಳ್ಳುತ್ತೇನೆ ಎಂದು ಸಂಕಲ್ಪ ಮಾಡಿ ಮೂರು ತಿಂಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ. ಖಂಡಿತ ಯಶಸ್ಸು ನಿಮ್ಮದಾಗುತ್ತದೆ ಎಂದು ಹಾವೇರಿ ಹಾಗೂ ರಾಣೆಬೆನ್ನೂರಿನ ಎಂಆರ್‌ಎಂ ಪಿಯು ಕಾಲೇಜ್‌ನ ಚೇರ್ಮನ್ ರಾಮ ಮೋಹನ ರಾವ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ಜಿಲ್ಲಾ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಎಂಆರ್‌ಎಂ ಪಿಯು ಕಾಲೇಜ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮ’ದಲ್ಲಿ ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು. ಓದುವ ಮಧ್ಯದಲ್ಲಿ ಸಣ್ಣ ಸಣ್ಣ ವ್ಯಾಯಾಮ, ಸಣ್ಣ ವಾಕಿಂಗ್ ಮಾಡಿ. ಹೊಟ್ಟೆ ಬಿರಿಯುವಂತೆ ತಿಂದರೆ ತರಗತಿಯಲ್ಲೂ ಹಾಯಾದ ನಿದ್ದೆ ಬರುತ್ತದೆ. ಓದುವಾಗ ನಿದ್ದೆ ಬರಬಾರದು ಎಂದರೆ ಊಟ ಮಾಡುವಾಗ ಹೊಟ್ಟೆ ತುಂಬ ತಿನ್ನದೇ ಅರ್ಧ ಭಾಗ ಮಾತ್ರ ಸೇವಿಸಿ, ಕಾಲು ಭಾಗ ನೀರು, ಕಾಲು ಭಾಗ ಖಾಲಿ ಬಿಡಿ ಎಂದರು. ಪ್ರಶ್ನೆಪತ್ರಿಕೆ ನೋಡಿ ಬಹುತೇಕ ವಿದ್ಯಾರ್ಥಿಗಳು ಬಹಳ ಸುಲಭ ಇತ್ತು ಎನ್ನುತ್ತಾರೆ. ಆದರೆ, ಕೆಲವರು ಮಾತ್ರ ರ್ಯಾಂಕ್ ಬರುತ್ತಾರೆ. ಪ್ರಶ್ನೆಗಳನ್ನು ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಒಂದು ಕಲೆ. ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಬೆಳಗ್ಗೆ 4.30ರಿಂದ 6.30ರವರೆಗಿನ ಬ್ರಾಹ್ಮಿ ಮುಹೂರ್ತ ಓದಿಗೆ ಅತ್ಯಂತ ಸೂಕ್ತವಾದ ಸಮಯ. ರಾತ್ರಿ 9 ಗಂಟೆ ನಂತರ ಏನೇ ಓದಿದರೂ ಮೆದುಳಿನ ನೋಂದಣಿ ಶಕ್ತಿ ಶೇ.50ರಷ್ಟು ಮಾತ್ರ ಇರುತ್ತದೆ. ಬೆಳಗ್ಗೆ ಓದಿದರೆ ಶೇ.100ರಷ್ಟು ಇರುತ್ತದೆ. ರಾತ್ರಿ ನಾಲ್ಕು ತಾಸು ಓದುವುದು ಬೆಳಗ್ಗೆ ಎರಡು ತಾಸು ಓದುವುದು ಒಂದೇ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿದರು. ಜೀವನದಲ್ಲಿ ಏನಾಗಬೇಕು ಎಂದು ಮೊದಲೇ ಗುರಿ ಇಟ್ಟುಕೊಳ್ಳಬೇಕು. ಆ ಕಲ್ಪನೆಗೆ ಅಗತ್ಯವಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು ಎಂದರು.

ಡಿಡಿಪಿಐ ಸುರೇಶ ಹುಗ್ಗಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಜೀವನದ ಪ್ರಮುಖ ಘಟ್ಟ. ರಾಜ್ಯದಲ್ಲಿ ನಮ್ಮ ಜಿಲ್ಲೆ ಕಳೆದ ವರ್ಷ 15ನೇ ಸ್ಥಾನದಲ್ಲಿದೆ. ಈ ಬಾರಿ ಉತ್ತಮ ಸ್ಥಾನ ಪಡೆಯಬೇಕು. ಇನ್ನು 90 ದಿನಗಳಲ್ಲಿ ಪರೀಕ್ಷೆ ಬರಲಿದ್ದು ಒಂದು ಸೆಕೆಂಡ್ ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ‘ವಿಜಯವಾಣಿ’ ವಿದ್ಯಾರ್ಥಿ, ಉದ್ಯೋಗ ಮಿತ್ರ ವಿತರಿಸಲಾಯಿತು.

ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಬಸವರಾಜ ಮಾಯಾಚಾರಿ, ಇತರರು ಉಪಸ್ಥಿತರಿದ್ದರು.

ಕೋಟ್:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೆಲ ಬದಲಾವಣೆಗಳಾಗಿವೆ. ಸಿಸಿಟಿವಿ ಕ್ಯಾಮರಾ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಎಲ್ಲರೂ ಚೆನ್ನಾಗಿ ಓದಲೇಬೇಕು. ಕನಕದಾಸರು, ಸರ್ವಜ್ಞ, ಶಿಶುನಾಳ ಷರೀಫರಂಥ ಸಂತರು ಜನಿಸಿದ ನಾಡಿನ ಮಕ್ಕಳು ನೀವು. ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಜ್ಜಾಗಿ. ಉತ್ತಮ ಅಂಕ ಪಡೆದು ಯಶಸ್ವಿಯಾಗಿ.

- ಅಕ್ಷಯ ಶ್ರೀಧರ, ಜಿಪಂ ಸಿಇಒ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net