ಜಲ ಸಂರಕ್ಷಣೆಗಾಗಿ ‘ಪಂಚ್ ಅಭಿಯಾನ’; ಜಿಪಂ ಸಿಇಒ ಅಕ್ಷಯ ಶ್ರೀಧರ ಮಾಹಿತಿ

Panch abhiyana
Published on

ಹಾವೇರಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯ ‘ಜಲ ಸಂಜೀವಿನಿ’ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ‘ಪಂಚ್ ಅಭಿಯಾನ’ ಹೆಸರಿನಲ್ಲಿ ಕಾರ್ಯ ಯೋಜನೆಗಳನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
ವಿಪತ್ತು ನಿರ್ವಹಣೆ, ಗೋಮಾಳ ಪ್ರದೇಶ ಅಭಿವೃದ್ದಿ, ಕೋಟಿ ವೃಕ್ಷ ಅಭಿಯಾನ, ನಿಷ್ಕ್ರಿಯಗೊಂಡಿರುವ ಕುಡಿಯವ ನೀರಿನ ಕೊಳವೆ ಬಾವಿಗಳ ಮರುಪೂರಣ ಹಾಗೂ ಹಸಿರು ಸರೋವರ ಅಭಿಯಾನ ಈ ಐದು ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ವಿಪತ್ತು ನಿರ್ವಹಣೆ : ಜಿಲ್ಲೆಯಲ್ಲಿ ಈಗಾಗಲೇ ಬರ ಮತ್ತು ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಿದಿಂದ (ಕೆಎಸ್‌ಡಿಎಂಎ) ನೈಸರ್ಗಿಕ ಸಂಪನ್ಮೂಲ ರಕ್ಷಣಾ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಯೋಜಿಸಲು ಮತ್ತು ಕಾರ್ಯತಗೊಳಿಸಲು ಕ್ರಮ ಕೈಗೊಂಡಿದೆ.
ನೈಸರ್ಗಿಕ ಸಂಪನ್ಮೂಲ ರಕ್ಷಣಾ ಕಾಮಗಾರಿಗಳಾದ ಕೆರೆ ಹೂಳೆತ್ತುವುದು, ಸಮಗ್ರ ಕೆರೆ ಅಭಿವೃದ್ದಿ, ನಾಲಾ ನಿರ್ಮಾಣ, ನಾಲಾ ದುರಸ್ತಿ, ಬದು ನಿರ್ಮಾಣ, ಕೃಷಿಹೊಂಡ, ನೆಡುತೋಪು ನಿರ್ಮಾಣ, ರಸ್ತೆ ಬದಿ ನೆಡುತೋಪು ನಿರ್ಮಾಣ, ಒಟ್ಟಾರೆ ಮಣ್ಣು ಮತ್ತು ನೀರು ಸಂರಕ್ಷಣೆಯ ಕಾಮಗಾರಿ ಅನುಷ್ಠಾನಗೊಳಿದಲಾಗುತ್ತಿದೆ.
ಜಿಲ್ಲೆಯಲ್ಲಿ ವರದಾ ಮತ್ತು ತುಂಗಭದ್ರಾ ನದಿಯು ಒಟ್ಟಾರೆ 121 ಕೀ.ಮಿ. ವಿಸ್ತಾರವಾಗಿದ್ದು, ಈ ನದಿ ದಡದಲ್ಲಿ ಬರುವ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆರೆಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ನದಿಯ ಎರಡು ತಂಡಗಳಲ್ಲಿ ಬಿದಿರು ಸಸಿಗಳನ್ನು ನೆಡುವುದರ ಮೂಲಕ ಮತ್ತು ತಡೆಗೊಡೆ ಮತ್ತು ಇತರೆ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಮೂಲಕ ನೆರೆಹಾವಳಿ ತಡೆಯಲು ಯೋಜನೆಗಳನ್ನು ರೂಪಿಸಲಾಗಿದೆ.
ಗೋಮಾಳ ಪ್ರದೇಶ ಅಭಿವೃದ್ದಿ: ಗ್ರಾಮ ಪಂಚಾಯಿತಿಯಲ್ಲಿ ಹಾಳಾದ ಗೋಮಾಳಗಳನ್ನು ಪುನರಜ್ಜೀವಗೊಳಿಸಲು ನರೇಗಾದಡಿ ಯೋಜಿಸಲಾಗಿದೆ. ಜಿಲ್ಲೆಯಲ್ಲಿ 2023-24ನೇ ಸಾಲಿಗೆ 8 ತಾಲೂಕುಗಳಲ್ಲಿ ಒಟ್ಟಾರೆ 82 ಗೋಮಾಳ ಜಾಗೆಯನ್ನು ಗುರುತಿಸಿ 644 ಕಾಮಗಾರಿಗಳನ್ನು ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು 2,643.08 ಲಕ್ಷ ರೂ. ಅನುದಾನವನ್ನು ಮೀಸಲಿರಿಸಲಾಗಿದೆ.
ಕೋಟಿ ವೃಕ್ಷ ಅಭಿಯಾನ: ಕೋಟಿ ವೃಕ್ಷ ಅಭಿಯಾನದಡಿ ಗೋಮಾಳ, ಕೆರೆ, ರಸ್ತೆ ಬದಿ, ಸರ್ಕಾರಿ ಖಾಲಿ ಜಾಗೆಯಲ್ಲಿ, ನೆಡುತೋಪು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಒಂದು ಕೋಟಿ ವೃಕ್ಷ ಅಭಿಯಾನಕ್ಕಾಗಿ ತೋಟಗಾರಿಕೆ ಕೃಷಿ, ಅರಣ್ಯ ಇಲಾಖೆಯಿಂದ ಸಸಿಗಳನ್ನುಪಡೆದು ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟಾರೆ 7.25 ಲಕ್ಷಗಳ ಸಸಿ ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಲ ಮರುರಣ: ಇದೇ ಜೂನ್‌ನಿಂದ ನಿಷ್ಕ್ರಿಯಗೊಂಡಿರುವ ಕುಡಿಯವ ನೀರಿನ ಕೊಳವೆ ಬಾವಿಗಳ ಮರುಪೂರಣ ಮಾಡುವ ಅಭಿಯಾನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 223 ಗ್ರಾಮ ಪಂಚಾಯಿತಿಗೆ 5ರಂತೆ 1,115 ನಿರುಪಯುಕ್ತ ಬೋರವೆಲ್‌ಗಳ ಮರುಪೂರಣ ಘಟಕದ ನಿರ್ಮಾಣಕ್ಕಾಗಿ ಗುರಿ ಹಾಕಿಕೊಂಡಿದ್ದು, ಸಮುದಾಯ ಮರುಪೂರಣ ಘಟಕದ ಅಂದಾಜು ಮೊತ್ತ 82,000 ರೂ. ನಿಗದಿಪಡಿಸಿ ಕಾರ್ಯಗತಗೊಳಿಸಲು ಉದ್ದೇಶಿಸಿದೆ ಎಂದು ಸಿಇಒ ತಿಳಿಸಿದ್ದಾರೆ.
ಹಸಿರು ಸರೋವರ ಅಭಿಯಾನ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಈಗಾಗಲೇ ಜಿಲ್ಲೆಯಲ್ಲಿ 200 ಕೆರೆಗಳನ್ನು ಆಯ್ಕೆ ಮಾಡಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಾಯೋಗಿಕವಾಗಿ 1 ಅಥವಾ 2 ಕೆರೆಗಳನ್ನು ಪರಿಸರ ಸ್ನೇಹಿ ಕೆರೆಗಳನ್ನು ನಿರ್ಮಿಸಲು ಅಭಿಯಾನದ ಉದ್ದೇಶವಾಗಿದೆ.
ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲಿ ಅಮೃತ ಸರೋವರ ಕೆರೆಗಳ ಕಾಮಗಾರಿಯು ಪ್ರಗತಿಯಲ್ಲಿದ್ದು, ಜಿಲ್ಲೆಯ 5 ಹಸಿರು ಸರೋವರಗಳನ್ನು ಗುರುತಿಸಿದ್ದು, ಸವಣೂರ ತಾಲೂಕಿನ -ಹುರಳಿಕುಪ್ಪಿ, ರಾಣೆಬೆನ್ನೂರ ತಾಲೂಕಿನ-ಅಂತರವಳ್ಳಿ, ಬ್ಯಾಡಗಿ ತಾಲೂಕಿ-ಕುಮ್ಮೂರು, ಹಾವೇರಿ ತಾಲೂಕಿನ ದೇವಿಹೊಸೂರು ಮತ್ತು ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಕೆರೆಗಳನ್ನು ಆಯ್ಕೆ ಮಾಡಿದ್ದು, ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ.
ಜೈವಿಕ್ ಅನಿಲ ಸ್ಥಾವರ : ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಜೈವಿಕ್ ಅನಿಲ ಸ್ಥಾವರ ಸ್ಥಾಪಿಸುವ ಕುರಿತು ಅಧಿಸೂಚನೆ ಹೊರಡಿಸಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಬಹುದಾದ ಮಾದರಿ ಜೈವಿಕ ಅನಿಲ ಘಟಕಗಳ ಮಾದರಿಗಳು ಧೀನ ಬಂಧು ಮಾದರಿ ಹಾಗೂ ಕೆ.ವಿ.ಐ.ಸಿ. ಮಾದರಿಯಾಗಿದೆ. ಅಕ್ಷರ ದಾಸೋಹ ಕೇಂದ್ರಗಳು, ಅಂಗನವಾಡಿಗಳು, ಸರ್ಕಾರಿ ವಸತಿ ಶಾಲೆಗಳು ಹಾಗೂ ಘನ ತ್ಯಾಜ್ಯ ವಿಲೇವಾರಿ ವಾಹನದ ಇಂಧನವಾಗಿ, ವೈಯಕ್ತಿಕ ಫಲಾನುಭವಿಗಳಿಗೆ ಜೈವಿಕ ಅನಿಲ ಸ್ಥಾವರ ನಿರ್ಮಾಣವನ್ನು ದನದ ಕೊಟ್ಟಿಗೆ ಹೊಂದಿರುವ ಫಲಾನುಭವಿಗಳಿಗೆ ಮತ್ತು ಸಮುದಾಯ ಮತ್ತು ಸಮುದಾಯ ಜೈವಿಕ ಅನಿಲ ಸ್ಥಾವರವನ್ನು ಘನ ತ್ಯಾಜ್ಯ ವಿಲೆವಾರಿ ಘಟಕದ ಹತ್ತಿರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದೆ. ಇದರಿಂದ ದನದ ಕೊಟ್ಟಿಗೆ ಹೊಂದಿರುವ ಮನೆಗಳಲ್ಲಿನ ಜಾನುವಾರುಗಳಿಗೆ ಸಗಣಿಯನ್ನು ಘಟಕಕ್ಕೆ ಬಳಸಹಬುದಾಗಿದೆ.
ಜಿಲ್ಲೆಯಲ್ಲಿ ಈ ಕುರಿತು 223 ಗ್ರಾಮ ಪಂಚಾಯಿತಿಗಳಿಗೆ ತಲಾ 2ರಂತೆ ಒಟ್ಟಾರೆ 446 ಜೈವಿಕ ಅನಿಲ ಸ್ಥಾವರಗಳನ್ನು ನಿರ್ಮಾಣ ಮಾಡಲು ಗುರಿಯನ್ನು ಹೊಂದಲಾಗಿದೆ. ಹೆಚ್ಚಿನ ಬೇಡಿಕೆ ಬಂದರೆ ಅವರಿಗೂ ಸಹ ನಿರ್ಮಿಸಲಾಗುವುದು. ಪ್ರತಿ ಘಟಕಕ್ಕೆ 25,000 ರೂ. ಸರ್ಕಾರಿ ವಂತಿಕೆ ಹಾಗೂ 25,000 ರೂ. ಫಲಾನುಭವಿ ವಂತಿಕೆ ಒಟ್ಟಾರೆ 50,000 ರೂ. ನಿಗದಿಪಡಿಸಿದೆ ಎಂದು ಸಿಇಒ ಅಕ್ಷಯ ಶ್ರೀಧರ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net