ನರೇಗಾದಡಿ ಪ್ರಾಚೀನ ವಸ್ತುಗಳ ಸಂರಕ್ಷಣೆ ಕಾರ್ಯ; ಜಿಪಂ ಸಿಇಒ ಅಕ್ಷಯ ಶ್ರೀಧರ

Hirekavanshi Shilashasan
Published on

ಹಾವೇರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಜಿಲ್ಲೆಯಲ್ಲಿ ವಿನೂತನವಾಗಿ ಪ್ರಾಚೀನ ವಸ್ತುಗಳ ಸಂರಕ್ಷಣೆ ಮಾಡುವ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಥಮ ಹಂತದಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಹಾನಗಲ್ಲ ತಾಲೂಕಿನ ಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕಾಂಶಿ ಗ್ರಾಮದಲ್ಲಿ ಲೊಕಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಹಳೆಯ ಶಾಸನಗಳು, ದೇವರ ವಿಗ್ರಹಗಳು ಮತ್ತು ಶಿಲೆಗಳ ಸಂರಕ್ಷಣೆ ಮಾಡಲಾಗುತ್ತಿದೆ. ನರೇಗಾದಡಿ, ಸಂರಕ್ಷಣೆ ಕಾಮಗಾರಿಯಡಿ ದೇವಸ್ಥಾನದ ಒಂದು ಭಾಗದಲ್ಲಿ ಜಾಗ ಲಭ್ಯತೆಯ ಅನುಗುಣವಾಗಿ ಮಣ್ಣು ಮತ್ತು ಸಿಮೆಂಟ್ ಕಾಂಕ್ರೀಟ್‌ನಿಂದ ಬಳಸಿಕೊಂಡು, ಜಾಗ ಗುರುತಿಸಿ ಪ್ರಾಚೀನ ವಸ್ತು ಸಂಗ್ರಹಣೆಗೆ ಅನುವು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಿರೇಕಾಂಶಿ ಗ್ರಾಮದಲ್ಲಿ ಕರ್ನಾಟಕದ ಹಿರೇಕಾಂಶಿಯಿಂದ ಬದಾಮಿ ಚಾಲುಕ್ಯ ರಾಜ ಆದಿತ್ಯವರ್ಮನ ಮೊದಲ ಶಿಲಾ ಶಾಸನವಿದೆ. ಇದನ್ನು ಕನ್ನಡ ಭಾಷೆಯಲ್ಲಿ ಮತ್ತು 7ನೇ ಶತಮಾನದ ಅಂಚಿನ ಪ್ರಾಚೀನ ಅಕ್ಷರಗಳಲ್ಲಿ ಬರೆಯಲಾಗಿದೆ. ಇದು ಬಾದಾಮಿಯ ಚಾಲುಕ್ಯರ ಎರಡನೇ ಪುಲಕೇಶಿಯ ಮಗ ಆದಿತ್ಯವರ್ಮನ ಆಳ್ವಿಕೆಯನ್ನು ಸೂಚಿಸುತ್ತದೆ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಜನರಿಗೆ ಕೆಲಸ ಒದಗಿಸುವುದು ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು ಮತ್ತು ಜನರಿಗೆ ಆರ್ಥಿಕವಾಗಿ ಸಬಲರಾಗಲು ನಿರಂತರ 100 ದಿನಗಳ ಕೆಲಸ ಒದಗಿಸಲಾಗುತ್ತಿದೆ ಎಂದು ಸಿಇಒ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net