8,000 ಎರೆಹುಳು ತೊಟ್ಟಿ ನಿರ್ಮಾಣ ಗುರಿ; ನಗೇರಾ ಯೋಜನೆಯಡಿ ಅಭಿಯಾನ; ಜಿಪಂ ಇಸಿಒ ಅಕ್ಷಯ ಶ್ರೀಧರ

21 HVR 2
Published on

ಹಾವೇರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರದ ಅನುಮೋದಿತ 266 ಕಾಮಗಾರಿಗಳ ಪಟ್ಟಿಯಲ್ಲಿ ರೈತರಿಗೆ ಅನುಕೂಲವಾಗುವ ಮತ್ತು ಕಪ್ಪು ಬಂಗಾರವೆಂದು ಹೇಳುವ ಎರೆಹುಳ ಗೊಬ್ಬರ ತಯಾರಿಸಲು ಎರೆಹುಳು ತೊಟ್ಟಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 8,000 ಎರೆಹುಳು ತೊಟ್ಟಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ಸಹಾಯಕ ನಿರ್ದೇಶಕರು(ಗ್ರಾಉ), ತಾಂತ್ರಿಕ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರು, ಬಿ.ಎಫ್.ಟಿ. ಮತ್ತು ಗ್ರಾಮ ಕಾಯಕ ಮಿತ್ರರರ ಸಭೆಯಲ್ಲಿ ‘ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ತಾಲೂಕಿಗೆ ಮೊದಲನೇ ಹಂತದಲ್ಲಿ 3 ತಿಂಗಳೊಳಗಾಗಿ ಕನಿಷ್ಠ 1,000 ಎರೆಹುಳು ತೊಟ್ಟಿ ನಿರ್ಮಾಣದ ಗುರಿ ಹೊಂದಲಾಗಿದೆ. ಮುಂದಿನ ಹಂತದಲ್ಲಿ ಉಳಿದ ರೈತರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುವುದು. ನರೇಗಾ ಯೋಜನೆಯಡಿ 20,000 ರೂ. ವೆಚ್ಚದಲ್ಲಿ ಗ್ರಾಮೀಣ ಭಾಗದ ರೈತರಿಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಹಸಿಕಸ ನಿರ್ವಹಣೆಯು ನೀರಿಕ್ಷಿತ ಮಟ್ಟದಲ್ಲಿ ಆಗದೇ ಇರುವುದರಿಂದ ಎರೆಹುಳು ತೊಟ್ಟಿಗಳ ನಿರ್ಮಾಣವು ಹಸಿಕಸ ನಿರ್ವಹಣೆಯಲ್ಲಿ ಸಹಾಯದೊಂದಿಗೆ ಸಾವಯವ ಗೊಬ್ಬರ ತಯಾರಿಕೆಯಲ್ಲಿ ಮಹತ್ತರ ಪಾತ್ರವಹಿಸಲಿದೆ. ಆದ್ದರಿಂದ ಎರೆಹುಳು ತೊಟ್ಟಿ ನಿರ್ಮಾಣ ಅಭಿಯಾನವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಎರೆಹುಳು ತೊಟ್ಟಿ ನಿರ್ಮಾಣದೊಂದಿಗೆ ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿ, ಉತ್ತಮ ಗುಣಮಟ್ಟದ ಆಹಾರ ಧಾನ್ಯ ಹಾಗೂ ತೋಟಗಾರಿಕೆ ಬೆಳೆಗಳನ್ನು ಉತ್ಪಾದಿಸುವಲ್ಲಿ ಅನುಕೂಲವಾಗುವ ಸದುದ್ದೇಶದಿಂದ ಈ ಅಭಿಯಾನ ಹೊಂದಿದೆ. ಜಿಲ್ಲೆಯ ಅರ್ಹ ಫಲಾನುಭವಿಗಳು ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು. ಎರೆಹುಳು ತೊಟ್ಟಿ ನಿರ್ಮಾಣಕ್ಕಾಗಿ ಇಂದೇ ನಿಮ್ಮ ಗ್ರಾಮ ಪಂಚಾಯಿತಿ ಸಂರ್ಪಕಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಎಚ್.ವೈ.ಮಿಶಿ, ಹಾಗೂ ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರು (ಗ್ರಾಉ), ತಾಂತ್ರಿಕ ಸಂಯೋಜಕರು ಮತ್ತು ಸಹಾಯಕರು, ಬಿ.ಎಫ್.ಟಿ.ಗಳು, ಗ್ರಾಮ ಕಾಯಕ ಮಿತ್ರರು, ಇತರರು ಉಪಸ್ಥಿತರಿದ್ದರು.

ಸಾವಯವ ಕೃಷಿ ವಲಯ ಕನಸು

ಹಾವೇರಿ ಜಿಲ್ಲೆಯಲ್ಲಿ ಶೇ.90ರಷ್ಟು ರೈತಾಪಿ ಜನರಿದ್ದು, ಎಲ್ಲರೂ ಕೃಷಿ ಅವಲಿಂಬಿತರಾಗಿದ್ದಾರೆ. ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶವು 58,000 ಹೆಕ್ಟೇರ್‌ನಷ್ಟಿದ್ದು, ತೋಟಗಾರಿಕೆ ಬೆಳೆಗಳಿಗೆ ಕಡ್ಡಾಯವಾಗಿ ಸಾವಯವ ಗೊಬ್ಬರ ಉಪಯೋಗಿಸುವುದರೊಂದಿಗೆ ಜಿಲ್ಲೆಯನ್ನು ಸಾವಯವ ಕೃಷಿ ವಲಯವನ್ನಾಗಿಸುವ ಸದುದ್ದೇಶ ಹೊಂದಲಾಗಿದೆ ಎಂದು ಅಕ್ಷಯ ಶ್ರೀಧರ ತಿಳಿಸಿದರು.

ಬೂದು ನೀರು ನಿರ್ವಹಣೆ ಕಾಮಗಾರಿ

ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಹಳ್ಳಿಗಳ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್ ಮತ್ತು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣೆ ಮಾಡಲು ಚರಂಡಿ, ಸಮುದಾಯ ಸೋಕ್‌ಪಿಟ್ ಮತ್ತು ವೈಯಕ್ತಿಕ ಸೋಕ್‌ಪಿಟ್ ಹಾಗೂ ಡಿವ್ಯಾಟ್ಸ್ ಸೇರಿದಂತೆ ಹಲವು ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕಪ್ಪು ನೀರು ನಿರ್ವಹಣೆಗಾಗಿ ತಾಲೂಕಿಗೆ ಒಂದರಂತೆ ಮಲತ್ಯಾಜ್ಯ ನಿರ್ವಹಣೆ ಘಟಕಗಳನ್ನು (ಪೀಕಲ್ ಸ್ಲಡ್ಜ್ ಟ್ರೀಟ್ಮೆಂಟ್ ಪ್ಲಾಂಟ್)ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತಿಯೊಂದಿಗೆ ಗ್ರಾಮ ಪಂಚಾಯಿತಿಗೆ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗಿದೆ. ಒಣಕಸ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ಅಕ್ಷಯ ಶ್ರೀಧರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net