ಅನ್ಯಾಯ ಎಸಗಿದ ಏಜೆನ್ಸಿ ವಿರುದ್ಧ ಕ್ರಮ; ಹಾಸ್ಟೆಲ್ ನೌಕರರ ಸಭೆಯಲ್ಲಿ ಜಿಪಂ ಸಿಇಒ ಅಕ್ಷಯ ಶ್ರೀಧರ ಭರವಸೆ

19 HVR 3
Published on

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಜಿಲ್ಲಾ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದೊಂದಿಗೆ ನಗರದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಸಭೆ ನಡೆಸಿದರು. ವೇತನ ನೀಡುವಲ್ಲಿ ತಾರತಮ್ಯ ಎಸಗಿದ ಏಜೆನ್ಸಿ ವಿರುದ್ಧ ಕ್ರಮ ಜರುಗಿಸಲಲಾಗುವುದು ಎಂದು ಭರವಸೆ ನೀಡಿದರು.
ವೇತನದಲ್ಲಿ ತಾರತಮ್ಯ ಮಾಡಿದ ಏಜೆನ್ಸಿ ವಿರುದ್ಧ ಕ್ರಮ ಕೈಗೊಂಡು, ಕಪ್ಪುಪಟ್ಟಿಗೆ ಸೇರಿಸುವಂತೆ ಸೆ.20ರಂದು 8 ತಾಲೂಕುಗಳ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಪ್ರತಿ ತಿಂಗಳು ಮೂರನೇ ಶನಿವಾರ ತಾಲೂಕು ಮಟ್ಟದಲ್ಲಿ ಸಿಬ್ಬಂದಿಯ ಸಮಸ್ಯೆ ಆಲಿಸಲು ವ್ಯವಸ್ಥೆ ಮಾಡಲಾಗುವುದು. ಇಲಾಖೆಯಲ್ಲಿ ನೌಕರರು ಎದುರಿಸುತ್ತಿರುವ ಕಿರುಕುಳ ತಡೆಗಟ್ಟಲು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಬಾಕಿ ವೇತನ, ನೌಕರಿ ಖಾಯಂಗೊಳಿಸುವುದು, ನೇರವಾಗಿ ಬ್ಯಾಂಕ್ ಖಾತೆಗೆ ಸಂಬಳ ಜಮೆ ಮಾಡುವುದು, ಸೇವಾ ಭದ್ರತೆ, ನೇರ ನೇಮಕಾತಿಯಲ್ಲಿ ಆಯ್ಕೆಯಾದ ಸಿಬ್ಬಂದಿಯನ್ನು ವಾಪಸ್ ನೇಮಿಸುವುದು ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ನಿತ್ಯಾನಂದ ಸ್ವಾಮಿ ಬೆಳಕು ಚೆಲ್ಲಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣ ಕೆ.ಎನ್., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ಎಚ್.ಎಚ್. ನದಾಫ್, ಶಾಂತಕ್ಕ ಗಡ್ಡಿಯವರ, ಶಿವರಾಜಕುಮಾರ ಹಿತ್ಲರ, ಶೋಭಾ ಡೊಳ್ಳೇಶ್ವರ, ಸುನೀತಾ ಬಡನಾಯಕರು, ಮಂಜಕ್ಕ ನಾಗೇನಹಳ್ಳಿ, ಗೀತಾ ಕಲಾಲ, ಸುಜಾತಾ ಹಾರೋಗೊಪ್ಪ, ನಿಂಬವ್ವ ಬಿ., ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net