

ಹಾವೇರಿ: ಬೇಸಿಗೆ ರಜೆ ನಂತರ ಪ್ರಸಕ್ತ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪ್ರಾರಂಭವಾಗಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಗಳಲ್ಲಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಮಧ್ಯಾಹ್ನದ ಉಪಹಾರ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಸೂಚನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಶಾಲಾ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟಕ್ಕೆ ಆದ್ಯತೆ ನೀಡುವ ಕುರಿತಂತೆ ನಿರ್ದೇಶನ ನೀಡಿದ್ದಾರೆ. ಶಾಲೆಯ ನೀರಿನ ಟ್ಯಾಂಕ್, ಸಿಂಟೆಕ್ಸ್, ನೀರಿನ ತೊಟ್ಟಿಗಳು, ಡ್ರಮ್‌ಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಶಾಲಾ ಮಕ್ಕಳಿಗೆ ನೀರು ಕುಡಿಯಲು ಯೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಡುಗೆಕೋಣೆ, ಪಾತ್ರೆ ಪರಿಕರಗಳನ್ನು ಡಿಟರ್ಜೆಂಟ್ ಸೋಪಿನಿಂದ ಸ್ವಚ್ಛಗೊಳಿಸಿ ಉಪಯೋಗಿಸಬೇಕು. ಆಹಾರ ಧಾನ್ಯಗಳು ಬಳಕೆಗೆ ಯೋಗ್ಯವಾಗಿದೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಸ್ವಚ್ಛಗೊಳಿಸಿ ಗುಣಮಟ್ಟದ ಆಹಾರಧಾನ್ಯ ಉಪಯೋಗಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮದಡಿ ಶಾಲೆಯಲ್ಲಿ ಮಾರ್ಚ್‌ನಲ್ಲಿ ಉಳಿಕೆಯಾದ ಶೇಂಗಾಚಿಕ್ಕಿ, ಹಳೆಯ ಮೊಟ್ಟೆಗಳನ್ನು ಹಾಗೂ ಔಷಧ ವಿತರಿಸಬಾರದು. ಹುಣಸಿಹಣ್ಣು, ಸಾಂಬಾರುಪುಡಿ, ಮಸಾಲೆ ಪಾಕೆಟ್‌ಗಳನ್ನು ಅಂತಿಮ ದಿನಾಂಕವನ್ನು ನೋಡಿ ಉಪಯೋಗಿಸಬೇಕು. ಇಲಾಖಾ ನಿಯಮಾನುಸಾರ ಸ್ವಚ್ಛತೆ, ಸುರಕ್ಷತೆಗೆ ಆದ್ಯತೆ ನೀಡಬೇಕು. ಶಾಲೆಗಳಲ್ಲಿ ಮಳೆಗಾಲದಲ್ಲಿ ಶಾಲಾ ಕೈತೋಟ ಮಾಡಿ, ಸೊಪ್ಪುಗಳು, ನುಗ್ಗೆಗಿಡ, ಕರಿಬೇವು ಹಾಗೂ ತರಕಾರಿ ಬೆಳೆಸಿ ಬಿಸಿಯೂಟಕ್ಕೆ ಉಪಯೋಗಿಸಬೇಕು. ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಇಒ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಹಾಲಿನಪುಡಿ ಗುಣಮಟ್ಟ ಪರಿಶೀಲಿಸಿ:
ಕ್ಷೀರಭಾಗ್ಯ ಕಾರ್ಯಕ್ರಮದಡಿ ಪೂರೈಸುವ ಹಾಲಿನ ಪ್ಯಾಕೆಟ್ ಮೇಲಿನ ಎಕ್ಸಪೈರಿ ಡೇಟ್ ಪರಿಶೀಲಿಸಿ ಅವಧಿ ಮೀರಿದ ಹಾಲಿನ ಪುಡಿ ಬಳಸಬಾರದು. ಶಾಲೆಯಲ್ಲಿ ಅರ್ಧ ಉಪಯೋಗಿಸಿದ ಪ್ಯಾಕೆಟ್ ಹಾಗೂ ಪ್ಯಾಕೆಟ್ ಒಡೆದು ಹಾಗೇ ಇಟ್ಟಿರುವ ಹಾಲಿನ ಪುಡಿಯ ಗುಣಮಟ್ಟವನ್ನು ಪರಿಶೀಲಿಸಬೇಕು.
ಮೆನು ಪ್ರಕಾರ ಅಡುಗೆ:
ಇಲಾಖೆ ನಿಗಧಿಪಡಿಸಿದ ಮೆನು ಪ್ರಕಾರ ಅಡುಗೆ ತಯಾರಿಸಬೇಕು ಹಾಗೂ ಮಕ್ಕಳಿಗೆ ಊಟ ವಿತರಿಸುವ ಮುಂಚಿತವಾಗಿ ಶಿಕ್ಷಕರು ಕಡ್ಡಾಯವಾಗಿ ಆಹಾರ ಗುಣಮಟ್ಟವನ್ನು ಅರ್ಧಗಂಟೆ ಮುಂಚಿತವಾಗಿ ಊಟಮಾಡಿ ಪರೀಕ್ಷಿಸಿ ಮಕ್ಕಳಿಗೆ ವಿತರಿಸಬೇಕು. ಆಹಾರ ದೃಢೀಕರಣ ವಹಿಯಲ್ಲಿ ನಮೂದಿಸಬೇಕು. ಶಾಲೆಯಲ್ಲಿ ಉಳಿದ ಮಾತ್ರೆಗಳನ್ನು ಪರಿಶೀಲಿಸಿ ಅವಧಿ ಮೀರಿದ ಮಾತ್ರೆಗಳನ್ನು ಆರೋಗ್ಯ ಇಲಾಖೆಗೆ ಹಿಂತಿರುಗಿಸಬೇಕು ಎಂದು ಸೂಚಿಸಿದ್ದಾರೆ.