ಮತಗಟ್ಟೆಗಳಲ್ಲಿ ನೀರು, ನೆರಳು, ಪಾನಕದ ವ್ಯವಸ್ಥೆ; ಬೇರೆ ಊರಿನಲ್ಲಿ ವಾಸವಿರುವ ಮತದಾರರನ್ನು ಸಂಪರ್ಕಿಸಿ; ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ ಸೂಚನೆ

3 HVR 5 A
Published on

ಹಾವೇರಿ: ಬೇಸಿಗೆಯ ಅತಿಯಾದ ತಾಪಮಾನ ಇರುವುದರಿಂದ ಮೇ 7ರಂದು ಮತದಾನದ ದಿನ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಮತದಾರರು ಬಿಸಿಲಿನಲ್ಲಿ ನಿಲ್ಲದಂತೆ ಕಡ್ಡಾಯವಾಗಿ ನೆರಳಿನ ವ್ಯವಸ್ಥೆ ಮಾಡಬೇಕು. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಲಿಂಬು ಪಾನಕ, ತುರ್ತು ಚಿಕಿತ್ಸಾ ವ್ಯವಸ್ಥೆ, ವಿಶೇಷ ಚೇತನರಿಗೆ ವ್ಹೀಲ್‌ಚೇರ್, ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ಹಿನ್ನಲೆಯಲ್ಲಿ ಗುರುವಾರ ಆಯೋಜಿಸಿದ್ದ ಮತದಾನದ ದಿನದ ಪೂರ್ವ ಸಿದ್ಧತೆಗಳ ಕುರಿತ ಸಭೆಯಲ್ಲಿ ಮಾತನಾಡಿದರು. ಮತಗಟ್ಟೆ ಹೊರಗೆ ಮತದಾರರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತಂತೆ ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡು ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಿ ಎಂದು ಸೂಚನೆ ನೀಡಿದರು.
ಮತದಾನ ಪ್ರಕ್ರಿಯೆಗೆ ನಿಯೋಜಿತ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಜತೆಗೆ ಮತದಾರರಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸರತಿ ಸಾಲಿನಲ್ಲಿ ನಿಂತಾಗ ಬಿಸಿಲು ಬೀಳುತ್ತಿದೆಯೇ ಎಂಬುದನ್ನು ಮುಂಚಿತವಾಗಿ ಗುರುತಿಸಿ ಶಾಮಿಯಾನ ಹಾಕಿಸಬೇಕು. ತಾಯಂದಿರ ಜತೆ ಮಕ್ಕಳು ಮತಗಟ್ಟೆಗೆ ಬಂದಾಗ ಪ್ರತ್ಯೇಕ ಮಕ್ಕಳ ವಿಶ್ರಾಂತಿ ಕೊಠಡಿ ಕಾಯ್ದಿರಿಸಬೇಕು. ನಿರ್ವಹಣೆಗೆ ಕೂಸಿನಮನೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಹಿರಿಯ ಮತದಾರರು, ವಿಶೇಷ ಚೇತನ ಮತದಾರರಿಗೆ ನೆರವು ಒದಗಿಸಲು ಸ್ವಯಂಸೇವಕರನ್ನು ನಿಯೋಜಿಸಬೇಕು. ವ್ಹೀಲ್‌ಚೇರ್ ವ್ಯವಸ್ಥೆ ಮಾಡಬೇಕು. ಲಿಂಬು, ಸಕ್ಕರೆ ಮಿಶ್ರಣದ ಪಾನಕವನ್ನು ನೀಡಬೇಕು ಎಂದು ಸೂಚನೆ ನೀಡಿದರು.
ವಿವಿಧ ಕೆಲಸಗಳ ಕಾರಣ ಊರಿನಿಂದ ಹೊರಗೆ ದುಡಿಯುವ ಜನರಿಗೆ ಮತದಾನ ದಿನ ಮರಳಿ ಊರಿಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿ. ಊರಿನಲ್ಲಿರುವ ಅವರ ಮನೆಯವರ ತಂದೆ-ತಾಯಿಗಳ ಮೂಲಕ ಫೋನಾಯಿಸಿ ಮತದಾನ ಮಾಡುವಂತೆ ಮನವೊಲಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಮತಗಟ್ಟೆಯೊಳಗೆ ಮೊಬೈಲ್ ನಿಷೇಧ
ಮತದಾನಕ್ಕೆ ಬರುವ ಮತದಾರರು ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಮತದಾನ ಕೊಠಡಿ ಪ್ರವೇಶ ಮುನ್ನವೇ ಯಾರಾದರೂ ಮೊಬೈಲ್ ತಂದಿದ್ದರೆ ತಡೆಹಿಡಿಯಬೇಕು. ಈ ಮೊಬೈಲ್‌ಗಳನ್ನು ಕೊಠಡಿ ಹೊರಗಡೆ ಸಂಗ್ರಹಿಸಬೇಕು. ಮತದಾನ ಮುಗಿಸಿ ಹೋಗುವ ಮುನ್ನ ಅವರಿಗೆ ಹಿಂತಿರುಗಿಸುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ತಾತ್ಕಾಲಿಕ ಕೌಂಟರ್ ಮಾಡಿ ಸ್ವಯಂಸೇವಕರನ್ನು ನೇಮಿಸಬೇಕು ಎಂದು ಸಿಇಒ ಸೂಚಿಸಿದರು.
ಅಂಬ್ಯುಲೆನ್ಸ್ ವ್ಯವಸ್ಥೆ:
ಅತಿಯಾದ ಬಿಸಿಲು ಇರುವ ಕಾರಣ ಪ್ರತಿ ಮತಗಟ್ಟೆಗೆ ಎರಡು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಬೇಕು. ತುರ್ತು ಪ್ರಾಥಮಿಕ ಚಿಕಿತ್ಸೆಗೆ ಕೌಂಟರ್ ತೆರೆಯಬೇಕು. ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತೆಯರನ್ನು ನಿಯೋಜಿಸಬೇಕು. ಓಆರ್ ಎಸ್ ಪ್ಯಾಕೆಟ್ ಜತೆಗೆ ಅತ್ಯಗತ್ಯ ಔಷಧಗಳನ್ನು ಕೌಂಟರ್‌ಗಳಲ್ಲಿ ಇರಿಸಬೇಕು. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಇದರೊಂದಿಗೆ 28 ಆಂಬುಲೆನ್ಸ್‌ಗಳು ಹಾಗೂ 108 ಕಾರ್ಯನಿರ್ವಹಣೆಯ 28 ಆಂಬುಲೆನ್ಸ್‌ಗಳು ಹಾಗೂ ಪೊಲೀಸ್ ಇಲಾಖೆಯ 112 ಸಹಾಯವಾಣಿಯ ಪೊಲೀಸ್ ವಾಹನಗಳನ್ನು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಲು ಕಾಯ್ದಿರಿಸಲಾಗಿದೆ.
ಮತದಾನ ಜಾಗೃತಿ
ಕಳೆದ ಚುನಾಚಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ. ವಿಶೇಷವಾಗಿ ಹಾವೇರಿ, ರಾಣೆಬೆನ್ನೂರ, ಶಿಗ್ಗಾಂವಿ ಪಟ್ಟಣ ಪ್ರದೇಶಗಳಲ್ಲಿ ಕಳೆದ ಬಾರಿ ಕಡಿಮೆ ಮತದಾನವಾಗಿದೆ. ನಗರಸಭೆ, ಪುರಸಭೆಯ ಮುಖ್ಯಾಧಿಕಾರಿಗಳು ವಿಶೇಷ ಗಮನಹರಿಸಿ ಎಲ್ಲ ವಾರ್ಡ್‌ಗಳಲ್ಲೂ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಮತದಾನ ಮಾಡಲು ಮತದಾರರಿಗೆ ಮನವೊಲಿಸಬೇಕು ಎಂದು ಸಿಇಒ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net