

ಹಾವೇರಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪ್ರತಿಯೊಬ್ಬ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವುದು ಕೂಡ ದೇಶಕ್ಕೆ ಸೇವೆ ಸಲ್ಲಿಸಿದಂತೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹೇಳಿದರು.
ಇಲ್ಲಿನ ದೇವಗಿರಿಯ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಎರಡುನೂರು ಅಮೃತ ಸರೋವರ ಕೆರೆಗಳ ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಅತ್ಯುತ್ತಮವಾಗಿ ಅಮೃತ ಸರೋವರ ನಿರ್ಮಾಣ ಮಾಡಿರುವ ಹಾವೇರಿ ತಾಲೂಕು ಕಬ್ಬೂರ ಗ್ರಾ.ಪಂ., ರಟ್ಟಿಹಳ್ಳಿ ತಾಲೂಕು ಶಿರಗಂಬಿ ಗ್ರಾ.ಪಂ., ಹಾನಗಲ್ಲ ತಾಲೂಕಿನ ಹಾವಣಗಿ ಗ್ರಾ.ಪಂ. ಹಾಗೂ ಬ್ಯಾಡಗಿ ತಾಲೂಕಿನ ಕುಮ್ಮೂರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕ ಮತ್ತು ಸಹಾಯಕರನ್ನು ಸನ್ಮಾನಿಸಿ ಅಭಿನಂದನಾ ಪತ್ರಗಳನ್ನು ನೀಡಲಾಯಿತು. 100 ದಿವಸ ಕೂಲಿ ಕೆಲಸ ಮಾಡಿದ ಕೂಲಿಕಾರರನ್ನು ಸನ್ಮಾನಿಸಲಾಯಿತು.
ದೇವಗಿರಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಪಥ ಸಂಚಲನ ನಡೆಸಿದರು. ಜಿ.ಪಂ. ಉಪಕಾರ್ಯದರ್ಶಿ ಎಸ್.ಬಿ ಮುಳ್ಳಳ್ಳಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.