ತೃತೀಯ ಲಿಂಗಿಗಳ ಅಕ್ಕ ಕೆಫೆ ಉದ್ಘಾಟನೆ ಜ.4ರಂದು; ಜಿಪಂ ಆವರಣದಲ್ಲಿ ಸಚಿವರಿಂದ ಲೋಕಾರ್ಪಣೆ

3 HVR 3
Published on

ಹಾವೇರಿ: ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಿರ್ಮಿಸಲಾಗಿರುವ ತೃತೀಯ ಲಿಂಗಿಗಳಿಂದಲೇ ನಿರ್ವಹಣೆ ಮಾಡಲಿರುವ ಅಕ್ಕ ಕೆಫೆಯನ್ನು ಜ.4ರಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟನೆ ಮಾಡಲಿದ್ದಾರೆ.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮಹಾತ್ವಾಕಾಂಕ್ಷೆಯ ಯೋಜನೆ ಈ ಅಕ್ಕ ಕೆಫೆ. ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆ ಒದಗಿಸುವುದು ಇದರ ಉದ್ದೇಶವಾಗಿದೆ. ರಾಜ್ಯಾದ್ಯಂತ ಒಂದೇ ಮಾದರಿಯ 50 ಕೆಫೆ ಸಂಜೀವಿನಿ (ಅಕ್ಕ ಕೆಫೆ) ಕ್ಯಾಂಟೀನ್‌ಗಳನ್ನು 2024-25ನೇ ಸಾಲಿನಲ್ಲಿ ಸ್ಥಾಪಿಸಲು ಸರ್ಕಾರವು ಕಾರ್ಯಕ್ರಮ ರೂಪಿಸಿದೆ.

ಜಿಪಂ ಕಟ್ಟಡದ ನೆಲ ಮಹಡಿಯಲ್ಲಿ ಈ ಅಕ್ಕ ಕೆಫೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿರುವ 30 ಲಿಂಗತ್ವ ಅಲ್ಪಸಂಖ್ಯಾತರ ಸ್ವ-ಸಹಾಯ ಸಂಘದ ಸದಸ್ಯರ ಮನವಿ ಮೇರೆಗೆ ಅವರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅಕ್ಕ ಕೆಫೆ ಉದ್ಯಮದ ತರಬೇತಿ ನೀಡಲಾಗಿದೆ.

ಕ್ಯಾಂಟೀನ್ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕೆಫೆ ಒಳಭಾಗದಲ್ಲಿ ಆಹಾರ ತಯಾರಿಕೆ ಕೊಠಡಿ, ಆಹಾರ ಪೂರೈಕೆ ಕೌಂಟರ್, ಶುದ್ಧ ಕುಡಿಯುವ ನೀರು, ಶೌಚಗೃಹ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಅಕ್ಕ ಕೆಫೆ ಹೊರ ಗೋಡೆಗಳಿಗೆ ವಿಶೇಷವಾಗಿ ವರ್ಲಿಕಲೆ ಚಿತ್ತಾರ ಬರೆಯಲಾಗಿದೆ. ಹೊರಭಾಗದಲ್ಲಿ ಹುಲ್ಲುಗಾವಲು ಉದ್ಯಾನವನ ನಿರ್ಮಾಣ ಮಾಡಲಾಗಿದೆ.

8.50 ಲಕ್ಷ ರೂ. ಅನುದಾನ

ಅಕ್ಕ ಕೆಫೆಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರ 8.50 ಲಕ್ಷ ರೂ. ಅನುದಾನ ನೀಡಿದೆ. ಈ ಅನುದಾನದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಅಕ್ಕ ಕೆಫೆಯ ನಿರ್ಮಾಣದ ಸಂಪೂರ್ಣ ಕಾಮಗಾರಿ ನಿರ್ವಹಿಸಿದೆ. ಅಕ್ಕ ಕೆಫೆಯ ಸಾಮಗ್ರಿ, ಆಹಾರ ಪದಾರ್ಥ ಮುಂತಾದ ವೆಚ್ಚಗಳಿಗೆ ಸರ್ಕಾರವು ದೇವಗಿರಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಮುಖಾಂತರ 1.50 ಲಕ್ಷ ಸಮುದಾಯ ಬಂಡವಾಳ ಸಾಲ ನಿಧಿಯನ್ನು ಸಂಘಕ್ಕೆ ಬಿಡುಗಡೆ ಮಾಡಿದೆ. ಜತೆಗೆ ಸಂಘದ ಸದಸ್ಯರು 4 ಲಕ್ಷ ರೂ. ಸಾಲ ಮಂಜೂರಾತಿಗೆ ಬ್ಯಾಂಕ್ ಆಫ್ ಬರೋಡಾ ಹಾವೇರಿ ಮುಖ್ಯ ಶಾಖೆಗೆ ಅರ್ಜಿ ಸಲ್ಲಿಸಿದ್ದು, ಸಾಲ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸಾಂಪ್ರದಾಯಿಕ ಆಹಾರ

ಪ್ರತಿ ಸೋಮವಾರ ಮತ್ತು ಗುರುವಾರ ಅಕ್ಕ ಕೆಫೆಯಲ್ಲಿ ಹೂರಣದ ಹೋಳಿಗೆ, ಸಜ್ಜಕದ ಹೋಳಿಗೆ, ಕಾಯಿ ಹೋಳಿಗೆ, ಶೇಂಗಾ ಸೇರಿದಂತೆ ವಿವಿಧ ತರೆವಾರಿ ಹೋಳಿಗೆಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟ ಸೇರಿದಂತೆ ವಿವಿಧ ಬಗೆಯ ಉಪಹಾರ ನೀಡಲು ಆಹಾರ ಮೆನು ತಯಾರಿಸಿದ್ದಾರೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಶುಚಿಯಾದ ಹಾಗೂ ರುಚಿಯಾದ ಊಟ-ಉಪಹಾರ ಪೂರೈಸಲು ಉದ್ದೇಶಿಸಲಾಗಿದೆ. ಈ ಅಕ್ಕ ಕೆಫೆಯಲ್ಲಿ ಕಾಫಿ, ಟೀ, ಉಪಹಾರ, ಊಟ, ಸಂಜೆ ಸ್ನ್ಯಾಕ್ಸ್ ಸೇರಿದಂತೆ ಎಲ್ಲವನ್ನೂ ಒಳಗೊಂಡಿದೆ.

ನಂದಿನಿ ಪಾರ್ಲರ್

ಅಕ್ಕ ಕೆಫೆ ಪಕ್ಕದಲ್ಲೇ ನಂದಿ ಉತ್ನನ್ನಗಳ ಮಾರಾಟ ಕೇಂದ್ರವನ್ನು ಸಹ ತೆರೆಯಲಾಗಿದೆ. ಇಲ್ಲಿ ನಂದಿನಿ ಉತ್ಪನ್ನಗಳ ವಿವಿಧ ಪಾನೀಯಗಳು, ಹಾಲು, ಮೊಸರು, ಬೆಣ್ಣ, ತುಪ್ಪ ಮತ್ತು ಐಸ್‌ಕ್ರೀ ಲಭ್ಯ.

ಕೋಟ್: 

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಎರಡು ಅಕ್ಕ ಕೆಫೆ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲು ಗುರಿ ನೀಡಲಾಗಿತ್ತು. ಒಂದು ಅಕ್ಕ ಕೆಫೆ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಆರಂಭಿಸಲಾಗಿದೆ. ಇನ್ನೊಂದು ರಾಣೆಬೆನ್ನೂರ ತಾಲೂಕಿನ ಕೋಡಿಯಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

- ಅಕ್ಷಯ ಶ್ರೀಧರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ, ಹಾವೇರಿ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net