

ಹಾನಗಲ್ಲ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಡಿ ಕವಿವಿ ಹಾವೇರಿ ವಲಯ ಮಟ್ಟದ 40 ಪದವಿ ಕಾಲೇಜುಗಳ ವ್ಯಾಪ್ತಿಯ ‘ಯುವಜನೋತ್ಸವವನ್ನು ನ. 19 ಹಾಗೂ 20ರಂದು ಹಾನಗಲ್ಲಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಎಚ್. ಹೊಳಿಯಣ್ಣನವರ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980ರಲ್ಲಿ ಕುಮಾರೇಶ್ವರ ಕಾಲೇಜು ಆರಂಭಗೊಂಡಿದ್ದು, 4 ದಶಕಗಳವರೆಗೂ ನಮಗೆ ಇಂಥ ಅವಕಾಶ ದೊರಕಿರಲಿಲ್ಲ. ಹಾವೇರಿಯ ಕವಿವಿ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ 40 ಪದವಿ ಕಾಲೇಜುಗಳ ಅಂತಿಮ ವರ್ಷದ 1600 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವಜನೋತ್ಸವದಲ್ಲಿ ಪ್ರತಿ ಕಾಲೇಜಿನಿಂದ 40 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ, ಸಮೂಹ ಗಾಯನ, ಜಾನಪದ ಆರ್ಕೆಸ್ಟ್ರಾ, ಜಾನಪದ ಹಾಗೂ ಬುಡಕಟ್ಟು ನೃತ್ಯ, ಶಾಸ್ತ್ರೀಯ ನೃತ್ಯ, ರಸಪ್ರಶ್ನೆ, ಆಶುಭಾಷಣ, ಚರ್ಚಾಸ್ಪರ್ಧೆ ಇತರ ಸಾಹಿತ್ಯಾತ್ಮಕ ಚಟುವಟಿಕೆಗಳು, ಏಕಾಂಕ ನಾಟಕ, ಕಿರುನಾಟಕ, ಅಣಕು ನಾಟಕ, ಮಿಮಿಕ್ರಿ ಹಾಗೂ ಪೇಂಟಿಂಗ್, ಕೋಲಾಜ್, ಪೋಸ್ಟರ್ ಮೇಕಿಂಗ್, ಕ್ಲೇ ಮಾಡೆಲಿಂಗ್, ಕಾರ್ಟೂನಿಂಗ್, ರಂಗೋಲಿ, ಸ್ಪಾಟ್ ಫೊಟೋಗ್ರಫಿ, ಇನ್ಸ್ಟಾಲೇಶನ್, ಮೆಹಂದಿ ಸೇರಿದಂತೆ ವಿವಿಧ ಲಲಿತಕಲೆಗಳ ಒಟ್ಟು 5 ವಿಭಾಗಗಳಲ್ಲಿ 27 ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಓರ್ವ ವಿದ್ಯಾರ್ಥಿ ಗರಿಷ್ಠ 4 ಸ್ಪರ್ಧೆಗಳಲ್ಲಿ ಮಾತ್ರ ಪಾಲ್ಗೊಳ್ಳಬಹುದಾಗಿದೆ. ಈ ಹಿಂದೆ ನಡೆದಿರುವ ಕವಿವಿ ಮಟ್ಟದ ಯುವಜನೋತ್ಸವದಲ್ಲಿ ನಮ್ಮ ಕಾಲೇಜು ಇಲ್ಲಿಯವರೆಗೆ ಸುಮಾರು 4 ಸಾವಿರ ಬಹುಮಾನಗಳನ್ನು ಪಡೆದುಕೊಂಡಿದೆ ಎಂದು ವಿವರಿಸಿದರು.
ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಪ್ರಕಾಶ ಹೊಳೇರ ಮಾತನಾಡಿ, ನ. 19ರಂದು ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಯುವಜನೋತ್ಸವವನ್ನು ಕವಿವಿ ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ.ಎಸ್.ಕೆ. ಪವಾರ ಉದ್ಘಾಟಿಸಲಿದ್ದಾರೆ. ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಉಪಾಧ್ಯಕ್ಷ ಪಿ.ವೈ. ಗುಡಗುಡಿ, ನಿರ್ದೇಶಕರು ಅತಿಥಿಗಳಾಗಿ ಪಾಲ್ಗೊಳ್ಳುವರು. ನ. 20ರಂದು ಯುವಜನೋತ್ಸವ ಸಮಾರೋಪಗೊಳ್ಳಲಿದೆ. ಯುವಜನೋತ್ಸವದ ಎಲ್ಲ ಸ್ಪರ್ಧೆಗಳಿಗೆ ಆಯಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಹಿತಿ, ಕಲಾವಿದರನ್ನು ನಿರ್ಣಾಯಕರನ್ನಾಗಿ ನೇಮಕಗೊಳಿಸಲಾಗಿದೆ. ಜಿಲ್ಲೆಯ 40 ಕಾಲೇಜುಗಳ ಉಪನ್ಯಾಸಕರು ಈ ಯುವಜನೋತ್ಸವದ ಯಶಸ್ಸಿಗೆ ಕೈ ಜೋಡಿಸಲಿದ್ದಾರೆ ಎಂದು ವಿವರಿಸಿದರು. ಯುವಜನೋತ್ಸವದ ಸಂಯೋಜಕ ಪ್ರೊ.ಅಶೋಕ ಪಾಗದ, ಸಹ ಸಂಯೋಜಕ ಪ್ರೊ.ಮಹಮ್ಮದ್ಸಾದಿಕ್ ಬಡಗಿ ಉಪಸ್ಥಿತರಿದ್ದರು.