ಯುವನಿಧಿ ಯೋಜನೆ ಸೌಲಭ್ಯಕ್ಕೆ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ

Published on

ಹಾವೇರಿ: ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಡಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ವ್ಯಾಸಂಗ ಮಾಡಿ ಜನವರಿ-2023ರ ನಂತರ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಫಲಿತಾಂಶದ ನಂತರ ನಿರುದ್ಯೋಗಿಯಾಗಿ 180 ದಿನಗಳನ್ನು ಪೂರೈಸಿದ ಅರ್ಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಈ ಪ್ರಯೋಜನ ಪ್ರತಿ ತಿಂಗಳು ಪಡೆಯಲು, ತಾನು ನಿರುದ್ಯೋಗಿ ಎಂದು, ವ್ಯಾಸಂಗ ಮುಂದುವರೆಸುತ್ತಿಲ್ಲ ಎಂದು ಹಾಗೂ ಸ್ವ-ಉದ್ಯೋಗಿಯಾಗಿಲ್ಲ ಎಂದು ಸ್ವಯಂ ಘೋಷಣೆಯನ್ನು ಪ್ರತಿ ತಿಂಗಳು 25ನೇ ತಾರೀಖಿನೊಳಗಾಗಿ ಮಾಡಬೇಕು. ಮಾರ್ಚ್-2024ರಿಂದ ಸ್ವಯಂ ಘೋಷಣೆ ಮಾಡದೆ ಉಳಿದಿರುವ ಅಭ್ಯರ್ಥಿಗಳು ಜೂ.25ರೊಳಗಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂಘೋಷಣೆ ಪ್ರಮಾಣಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಲ್ಲಿ ನೋಂದಾಯಿಸಿಕೊಂಡ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಸೇವಾಸಿಂಧು ಪೋರ್ಟಲ್‌ನಲ್ಲಿ ಪ್ರತಿ ಅಭ್ಯರ್ಥಿಯು ಲಾಗಿನ್ ಸೃಜಿಸಲು ಅವಕಾಶವಿರುತ್ತದೆ. ಈ ಲಾಗಿನ್‌ನಲ್ಲಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ ರಹವಾಸಿ ಪರಿಶೀಲನೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಿ ತಮ್ಮ ರಹವಾಸಿ ಪರಿಶೀಲಿಸಿ ದೃಡೀಕರಿಸಿಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net