ಅಂಬೇಡ್ಕರ್ ಪುಸ್ತಕ ಓದಿನಿಂದ ವ್ಯಕ್ತಿತ್ವ ವಿಕಸನ; ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ; ಯುವಾ ಬ್ರಿಗೇಡ್, ಜಿಎಚ್ ಕಾಲೇಜ್ ಸಹಯೋಗದಲ್ಲಿ ಬಾಬಾಸಾಹೇಬರ ಚಿಂಥನಗೋಷ್ಠಿ

14 HVR 2
Published on

ಹಾವೇರಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುಸ್ತಕ ಓದಿದರೆ ಸಾಕು, ಅದಕ್ಕಿಂತ ಒಳ್ಳೆಯ ವ್ಯಕ್ತಿತ್ವ ವಿಕಸನ ಮತ್ತೊಂದಿಲ್ಲ. ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಪುಸ್ತಕ ಓದಬೇಕು. ಅವರ ಸಾಮಾಜಿಕ ಸಮಾನತೆಯ ಕನಸು ನನಸು ಮಾಡಬೇಕು ಎಂದು ಚಿಂತಕ, ಲೇಖಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು. ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಯುವಾ ಬ್ರಿಗೇಡ್ ವತಿಯಿಂದ ನಗರದ ಕೆಎಲ್‌ಇ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾಲೇಜ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಬೆಳಕು ಹೊಳಪು’ ಡಾ.ಬಿ.ಆರ್ ಅಂಬೇಡ್ಕರ್ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಾಬಾ ಸಾಹೇಬರು ಜನರಿಗೆ ಎಷ್ಟು ಅರ್ಥವಾಗಿದ್ದಾರೋ ಅದಕ್ಕಿಂತ ಹೆಚ್ಚಾಗಿ ಅರ್ಥವಾಗದೇ ಉಳಿದಿದ್ದಾರೆ. ಅದರ ಪರಿಣಾಮಗಳನ್ನು ಇಂದು ನಾವು ನೋಡುತ್ತಿದ್ದೇವೆ. ಬಾಬಾಸಾಹೇಬರ ಹೋರಾಟದ ಹಾದಿ ಸಾಮಾನ್ಯವಾದ ಹಾದಿಯಲ್ಲ. ಅಂಬೇಡ್ಕರ್ ಅವರು ಬಾಲ್ಯದಲ್ಲಿ ಸಾರ್ವಜನಿಕ ನಲ್ಲಿಯ ನೀರು ಕುಡಿಯಲು ಹೋದರೆ ಜನ ಹೊಡೆದು ಓಡಿಸುತ್ತಿದ್ದರು. ಒಂದು ಗುರಿಗೋಸ್ಕರ ಅವರು ಅಕ್ಕಪಕ್ಕದ ಏನನ್ನೂ ನೋಡದೇ, ಯಾವ ಆಮಿಷಕ್ಕೂ ಜಗ್ಗದೇ ಮುನ್ನುಗ್ಗುವ ಛಾತಿಯನ್ನು ಬೆಳೆಸಿಕೊಂಡಿದ್ದರು. ಅದರ ಪರಿಣಾಮವೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು. ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿ, ಜನಹಿತಕ್ಕಾಗಿ ಏನಾದರೂ ಮಾಡಬೇಕು ಎಂದು ಹಠತೊಟ್ಟ ಹಠಯೋಗಿ ಡಾ.ಬಿ.ಆರ್ ಅಂಬೇಡ್ಕರ್. ಎಲ್ಲರಿಗೂ ಸಮಾನತೆ ಸಿಗಬೇಕು ಎಂಬ ಛಲ ಅವರನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಯಿತು. ಅವರು ಮನಸ್ಸು ಮಾಡಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಅವರು ಜನಹಿತಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಬಹಳಷ್ಟು ಜನ ನಾವು ಇನ್ನೂ ಸಂವಿಧಾನವನ್ನೇ ಅರಿತುಕೊಂಡಿಲ್ಲ. ಇನ್ನು ಅಂಬೇಡ್ಕರ್ ಅವರನ್ನು ಅರಿತುಕೊಳ್ಳುವುದು ದೂರದ ಮಾತಾಗಿದೆ ಎಂದರು. ಮೂಲಭೂತ ಹಕ್ಕುಗಳ ಅರಿವು ಹಲವರಿಗೆ ಇಲ್ಲ. ನಾನು ಭಾರತೀಯ ಎಂದು ಹೇಳಿಕೊಳ್ಳುವುದಕ್ಕೆ ಯಾವುದೇ ಹಿಂಜರಿಕೆ ಇರಬಾರದು. ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ಕಲ್ಪನೆ ಕಟ್ಟಿಕೊಟ್ಟಿದ್ದಾರೆ. 2047ಕ್ಕೆ ಭಾರತ ಹೇಗೆ ಇರಬೇಕು ಎಂಬ ಯೋಜನೆ ರೂಪಿಸಿದ್ದಾರೆ. ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಎಂ.ಸಿ ಕೊಳ್ಳಿ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ಯಶಸ್ವಿಗೊಳಿಸಲು ಹೋರಾಡಿ ಅದರಲ್ಲಿ ಯಶಸ್ವಿಯಾದರು. ಬದುಕಿನ ಆಧಾರದ ಮೇಲೆ ಪ್ರಜಾಪ್ರಭುತ್ವ ಕಟ್ಟಿದರು. ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮ ಅಧ್ಯಯನ ಮಾಡಿದ್ದರು. ಅವರ ಮೌಲ್ಯಾಧಾರಿತ ಚಿಂತನೆಗಳು ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಎಲ್ ಬಾಲೆಹೊಸೂರು ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಏ ಕೊಲ್ಲಾಪುರೆ, ಪ್ರಜ್ಞಾಪ್ರವಾಹ ಅಖಿಲ ಭಾರತ ಸಹಸಂಯೋಜಕ ರಘುನಂದನ, ಕೆ.ಎನ್ ಪಾಟೀಲ, ನಿರಂಜನ ಪೂಜಾರ, ಡಾ.ಶಿವಾನಂದ ಕೆಂಬಾವಿ, ಇತರರು ಉಪಸ್ಥಿತರಿದ್ದರು. ವಿವಿಧ ಗೋಷ್ಠಿಗಳು :

ಸಂವಿಧಾನ ತಜ್ಞ ಸುಧಾಕರ ಹೊಸಳ್ಳಿ, ಚಿಂತಕರಾದ ಫಟಾಫಟ್ ಶ್ರೀನಿವಾಸ, ರೋಹಿತ ಚಕ್ರತೀರ್ಥ, ಅಂಕಣಕಾರ ಪ್ರವೀಣಕುಮಾರ ಮಾವಿನಕಾಡು, ಲೇಖಕ ವಿಕಾಸ ಪುತ್ತೂರು ವಿವಿಧ ಗೋಷ್ಠಿಗಳಲ್ಲಿ ಭಾಗಿಯಾಗಿ ವಿಷಯ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net