ಜಿಲ್ಲೆಯಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಳ; 31,318 ಯುವಕ- ಯವತಿರಿಂದ ಮೊದಲ ಬಾರಿಗೆ ಮತದಾನ

Young Voters
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಯುವ ಮತದಾರರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಜಾಗೃತಗೊಂಡ ಪರಿಣಾಮ ಈ ಬಾರಿ ಜಿಲ್ಲೆಯಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯ 31,318 ಯುವಕ- ಯುವತಿಯರು ಮೊದಲ ಬಾರಿಗೆ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಜಿಲ್ಲಾಡಳಿತ ಹೊಸ ಮತದಾರರ ನೋಂದಣಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿತ್ತು. ಕಾಲೇಜುಗಳಿಗೆ ತೆರಳಿ 18 ವರ್ಷ ಪೂರೈಸುವ ತರುಣ- ತರುಣಿಯರನ್ನು ಗುರುತಿಸಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹ ನೀಡಿತು. ಪರಿಣಾಮ ದೊಡ್ಡ ಪ್ರಮಾಣದ ಯುವ ಸಮೂಹ ನೋಂದಣಿ ಮಾಡಿತು. ಈ ಮೂಲಕ ಉತ್ತಮ ಸಾಧನೆ ಮಾಡಿದ ಜಿಲ್ಲೆಗಳಲ್ಲಿ ಮೊದಲ ಸಾಲಿನಲ್ಲಿ ಹಾವೇರಿ ಸೇರಿದೆ.
ಜಿಲ್ಲೆಯಲ್ಲಿ 12.91 ಲಕ್ಷ ಮತದಾರರು: ಜಿಲ್ಲೆಯಲ್ಲಿ ಮಾರ್ಚ್ 29ರ ವರೆಗಿನ ಮಾಹಿತಿಯಂತೆ 6,60,270 ಪುರುಷ ಹಾಗೂ 6,30,879 ಮಹಿಳಾ ಮತದಾರರು ಹಾಗೂ ಇತರೆ 45 ಮತದಾರರು ಸೇರಿ ಒಟ್ಟು 12,91,194 ಮತದಾರರಿದ್ದಾರೆ. ರಾಣೇಬೆನ್ನೂರ ಕ್ಷೇತ್ರ 2,35,074 ಮತದಾರರನ್ನು ಹೊಂದುವ ಮೂಲಕ ಅತಿ ಹೆಚ್ಚು ಮತದಾರರಿರುವ ಕ್ಷೇತ್ರ ಎಂದೆನಿಸಿಕೊಂಡಿದೆ. ಹಿರೇಕೆರೂರ 1,84,534 ಮತದಾರರನ್ನು ಹೊಂದುವ ಮೂಲಕ ಕಡಿಮೆ ಮತದಾರರನ್ನು ಹೊಂದಿದೆ. 80 ವರ್ಷ ಮೇಲ್ಪಟ್ಟ 32,043 ಮತದಾರರಿದ್ದಾರೆ. 22,297 ವಿಶೇಷ ಚೇತನ ಮತದಾರರಿದ್ದಾರೆ. 909 ಸೇವಾ ಮತದಾರರಿದ್ದಾರೆ. 34 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.
ಏಪ್ರಿಲ್ 1ಕ್ಕೆ 2,725 ಹೊಸ ಸೇರ್ಪಡೆ
2023ರ ಏಪ್ರಿಲ್ 1ಕ್ಕೆ 18 ವರ್ಷ ಪೂರೈಸುವ 2,725 ಯುವಕ- ಯುವತಿಯರು ಈ ಬಾರಿಯ ಮತದಾನದ ಹಕ್ಕು ಪಡೆಯಲಿದ್ದಾರೆ. ಇವರಿಂದ ಮುಂಗಡವಾಗಿಯೇ ನೋಂದಣಿ ಪತ್ರ ಪಡೆದಿರುವ ಜಿಲ್ಲಾಡಳಿತ, ಇವರಿಗೆ ಏಪ್ರಿಲ್ 1ರಂದು 18 ವರ್ಷ ತುಂಬುತ್ತಿದ್ದಂತೆ ಮತದಾನಕ್ಕೆ ಅರ್ಹತೆ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಕ್ಷೇತ್ರವಾರು ಮತದಾರರ ವಿವರ:
82-ಹಾನಗಲ್ಲ ಕ್ಷೇತ್ರದಲ್ಲಿ 1,07,842 ಪುರುಷ, 1,01,958 ಮಹಿಳಾ ಹಾಗೂ ಇತರೆ 04 ಮತದಾರರು ಸೇರಿ 2,09,804 ಮತದಾರರಿದ್ದಾರೆ. 83-ಶಿಗ್ಗಾಂವಿ ಕ್ಷೇತ್ರದಲ್ಲಿ 1,15,453 ಪುರುಷ, 1,08,321 ಮಹಿಳಾ ಹಾಗೂ ಇತರೆ 10 ಮತದಾರರು ಸೇರಿ 2,23,784 ಮತದಾರರಿದ್ದಾರೆ.
84-ಹಾವೇರಿ(ಎಸ್ಸಿ) ಕ್ಷೇತ್ರದಲ್ಲಿ 1,18,187 ಪುರುಷ, 1,12,616 ಮಹಿಳಾ ಹಾಗೂ ಇತರೆ 7 ಮತದಾರರು ಸೇರಿ 2,30,810 ಮತದಾರರಿದ್ದಾರೆ. 85-ಬ್ಯಾಡಗಿ ಕ್ಷೇತ್ರದಲ್ಲಿ 1,05,453 ಪುರುಷ, 1,10,730 ಮಹಿಳಾ ಹಾಗೂ ಇತರೆ 05 ಮತದಾರರು ಸೇರಿ 2,07,188 ಮತದಾರರಿದ್ದಾರೆ.
86-ಹಿರೇಕೆರೂರ ಕ್ಷೇತ್ರದಲ್ಲಿ 94,621 ಪುರುಷ, 89,909 ಮಹಿಳಾ ಹಾಗೂ ಇತರೆ 04 ಮತದಾರರು ಸೇರಿ 1,84,534 ಮತದಾರರಿದ್ದಾರೆ. 87-ರಾಣೇಬೆನ್ನೂರ ಕ್ಷೇತ್ರದಲ್ಲಿ 1,18,714 ಪುರುಷ, 1,16,345 ಮಹಿಳಾ ಹಾಗೂ ಇತರೆ 15 ಮತದಾರರು ಸೇರಿ 2,35,074 ಮತದಾರರಿದ್ದಾರೆ.
ಕೋಟ್:
ಜಿಲ್ಲೆಯಲ್ಲಿ ಈ ಬಾರಿ 31,318 ಹೊಸ ಮತದಾರರು ಮೊದಲ ಬಾರಿಗೆ ಮತ ಚಲಾವಣೆ ಹಕ್ಕು ಚಲಾಯಿಸಲಿದ್ದಾರೆ. ಈ ಮೂಲಕ ಯುವ ಮತದಾರರ ಸಂಖ್ಯೆ ಹೆಚ್ಚಿಸುವಲ್ಲಿ ಜಿಲ್ಲೆ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿದೆ.
ಪೂಜಾರ ವೀರಮಲ್ಲಪ್ಪ, ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net