

ಕೇಶವಮೂರ್ತಿ ವಿ.ಬಿ. ಹಾವೇರಿ
ಬಾಲ್ಯದಿಂದಲೇ ವ್ಯಾಯಾಮ, ಯೋಗದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಚಿಕ್ಕಅರಳೀಹಳ್ಳಿ ಮೂಲದ ಮಂಜುನಾಥ ಕಜ್ಜರಿ ಎಂಬ ಹಳ್ಳಿ ಹೈದ ಯೋಗರತ್ನ ಎಂಬ ಬಿರುದು ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. 26 ವರ್ಷಗಳ ಸೇವೆಯಲ್ಲಿ ಲಕ್ಷಕ್ಕೂ ಅಧಿಕ ಜನರಿಗೆ ಯೋಗ ತರಬೇತಿ ನೀಡಿರುವ ಮಂಜುನಾಥ, ನಾಡಿನಾದ್ಯಂತ 300ಕ್ಕೂ ಅಧಿಕ ಯೋಗ ಶಿಕ್ಷಕರನ್ನು ತಯಾರಿಸಿದ್ದಾರೆ.
ಎಂಎಸ್‌ಸಿ ಯೋಗಿಕ್ ಸೈನ್ಸ್ ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ ಯೋಗ ಪದವಿ, ಸರ್ಟಿಫಿಕೇಟ್ ಇನ್ ಯೋಗ ಸೇರಿದಂತೆ ಅನೇಕ ಪದವಿಗಳನ್ನು ಪಡೆದಿರುವ ಮಂಜುನಾಥ ಕಜ್ಜರಿ 11 ವರ್ಷಗಳ ಕಾಲ ಬೆಂಗಳೂರಿನ ರಾಷ್ಟ್ರೋತ್ಥಾನ ಸಂಸ್ಥೆಯಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಬೆಂಗಳೂರಿನ ವೇರಾ ಸ್ಕೂಲ್ ಆಫ್ ಯೋಗ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಾಥಮಿಕ ಶಾಲೆಗೆ ಹೋಗುವ ಹಂತದಲ್ಲೇ ನನ್ನ ತಂದೆ ಜತೆಗೆ ನಿತ್ಯವೂ ಹೊಲಕ್ಕೆ ಹೋಗಿ ವ್ಯಾಯಾಮ ಮಾಡುತ್ತಿದ್ದೆ. ಶಿರ್ಶಾಸನ ನನಗೆ ತುಂಬ ಇಷ್ಟವಾದ ಆಸನವಾಗಿತ್ತು. ಹಾಗಾಗಿ, ಶಿಕ್ಷಕರು ಆಗಾಗ ವೇದಿಕೆಯಲ್ಲಿ ಶಿರ್ಶಾಸನ ಪ್ರದರ್ಶನ ಮಾಡಿಸುತ್ತಿದ್ದರು. ಇದೇ ಕಾರಣಕ್ಕೆ ನಾನು ಯೋಗದ ಕಡೆಗೆ ಒಲವು ಬೆಳೆಸಿಕೊಂಡೆ. ಮುರಾರ್ಜಿ ದೇಸಾಯಿ ರಾಷ್ಟ್ರೀಯ ಮಂಡಳಿ ನಿರ್ದೇಶಕ ಈಶ್ವರ ಬಸವರೆಡ್ಡಿ ನನ್ನ ಯೋಗ ಶಿಕ್ಷಕರು. 300ಕ್ಕೂ ಅಧಿಕ ಉಚಿತ ಯೋಗ ಶಿಬಿರ ಮಾಡಲು ಅವರೇ ಪ್ರೇರಣೆ ಎನ್ನುತ್ತಾರೆ ಮಂಜುನಾಥ ಕಜ್ಜರಿ.
ಸರ್ಕಾರಿ ಶಾಲೆಗಳಿಗೆ ಉಚಿತ ಸೇವೆ
ಖಾಸಗಿ ಶಾಲೆ ಮಕ್ಕಳಿಗೆ ಯೋಗ ಶಿಕ್ಷಣ ಸುಲಭವಾಗಿ ದೊರೆಯುತ್ತದೆ. ಆದರೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಯೋಗ ದುಬಾರಿಯಾಗಿದೆ. ಹಾಗಾಗಿ, ರಾಜ್ಯದ ಎಲ್ಲ ಸರ್ಕಾರ ಶಾಲಾ ಮಕ್ಕಳಿಗೂ ಉಚಿತವಾಗಿ ಯೋಗ ಶಿಕ್ಷಣ ನೀಡಬೇಕು ಎಂಬುದು ನನ್ನ ಗುರಿಯಾಗಿದೆ. ಹಾಗಾಗಿ, ಪ್ರತಿ ಶನಿವಾರ ಮತ್ತು ಭಾನುವಾರ ಉಚಿತ ಯೋಗ ಶಿಬಿರಗಳನ್ನು ಆಯೋಜಿಸುತ್ತಿದ್ದೇನೆ. ಹಾವೇರಿ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಯ ಆಸಕ್ತರು ನನ್ನನ್ನು (ಮೊ.ಸಂ. 94819 36449) ಸಂಪರ್ಕಿಸಬಹುದು ಎನ್ನುತ್ತಾರೆ ಮಂಜುನಾಥ ಕಜ್ಜರಿ. ಬಾಕ್ಸ್
ಹಲವು ಪ್ರಶಸ್ತಿ, ಸನ್ಮಾನ
ಮಂಜುನಾಥ ಕಜ್ಜರಿ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರಾಗೃಹ ಇಲಾಖೆ, ಸೇರಿದಂತೆ ಹಲವೆಡೆ ಉಚಿತ ಯೋಗ ಶಿಬಿರ ನಡೆಸಿದ್ದಾರೆ. ಇವರ ಸೇವೆ ಪರಿಗಣಿಸಿ ಯೋಗ ಸಾಧಕ ರಾಜ್ಯ ಪ್ರಶಸ್ತಿ, ಯೋಗ ಪ್ರವೀಣ ಪ್ರಶಸ್ತಿ, ಉತ್ತಮ ಯೋಗ ಶಿಕ್ಷಕ ಪ್ರಶಸ್ತಿ, ಯೋಗ ವಿಭೂಷಣ ಪ್ರಶಸ್ತಿ, ತಮಿಳುನಾಡು ಕಾಂಚಿಪುರದ ಕಾಮಕೋಟಿ ಶ್ರೀಗಳಿಂದ ಯೋಗರತ್ನ ರಾಜ್ಯ ಪ್ರಶಸ್ತಿ, ಸೇರಿದಂತೆ ಇನ್ನೂ ಹತ್ತಾರು ಪ್ರಶಸ್ತಿ, ಸನ್ಮಾನ ದೊರೆತಿವೆ.
ಕೋಟ್:
ಬೆಂಗಳೂರಿನ ಅನೇಕ ವಿದೇಶಿಗರಿಗೆ ಯೋಗ ಕಲಿಸಿದ್ದೇನೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿ ಯೋಗ ಶಿಬಿರಗಳನ್ನು ಆಯೋಜಿಸಿದ್ದೇನೆ. ಪ್ರಸ್ತುತ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಯೋಗ ಕಲಿಸುವುದು ನನ್ನ ಗುರಿಯಾಗಿದೆ.
ಮಂಜುನಾಥ ಕಜ್ಜರಿ, ಯೋಗ ಶಿಕ್ಷಕ