ರಾಹುಲ್ ಪ್ರಧಾನಿ ಆಗಿದ್ದರೆ ಹಿಂದುಗಳ ಸರ್ವನಾಶ; ಬಸನಗೌಡ ಪಾಟೀಲ ಯತ್ನಾಳ

Published on

ಹಾವೇರಿ: ನರೇಂದ್ರ ಮೋದಿ ಅವರು ಪ್ರಧಾನಿ ಆಗಿರುವುದರಿಂದ ಇಷ್ಟಾದರೂ ಹಿಂದುಗಳು ಉಳಿದುಕೊಂಡಿದ್ದೇವೆ. ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯನಂಥವರು ಪ್ರಧಾನಿಯಾಗಿದ್ದರೆ ಹಿಂದುಗಳ ಸರ್ವನಾಶ ಆಗುತ್ತಿತ್ತು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ 370 ಕಲಂ ತೆಗೆದ ಮೇಲೆ ಶಾಂತಿ ನೆಲೆಸಿ, ಅಭಿವೃದ್ಧಿಯಾಗಿದೆ. ಇದರಿಂದ ಹತಾಶಗೊಂಡು ಪಾಕಿಸ್ತಾನ ಈ ಕೃತ್ಯ ಮಾಡಿದೆ. ಒಂದು ಘಟನೆಯಿಂದ ಭದ್ರತಾ ವೈಫಲ್ಯ ಎನ್ನಲಾಗದು. ಕಾಶ್ಮೀರ ಈ ಮೊದಲು ಅಪಘಾನಿಸ್ತಾನದಿಂದ ಹಿಡಿದು ಪಾಕಿಸ್ತಾನ, ಬಾಂಗ್ಲಾದೇಶ ಎಲ್ಲೆಡೆ ಹಿಂದುಗಳಿದ್ದರು. ಆದರೆ, ಇವತ್ತು ಹಿಂದುಗಳ ಭೌಗೋಳಿಕ ವಾಸಸ್ಥಳ ಕುಗ್ಗಿದೆ. ಪ್ರಸ್ತುತ ಭಾರತದಲ್ಲೂ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲದಂತಾಗಿದೆ. ಹೀಗಾದರೆ ಹಿಂದುಗಳು ಎಲ್ಲಿಗೆ ಹೋಗಬೇಕು ? ಎಂದು ಪ್ರಶ್ನಿಸಿದರು.

ಕೆಲ ಲಿಂಗಾಯತ ಸ್ವಾಮಿಗಳು ಇಸ್ಲಾಂ ಶಾಂತಿಯ ಧರ್ಮ, ಲಿಂಗಾಯತ ಮತ್ತು ಇಸ್ಲಾಂ ಧರ್ಮದಲ್ಲಿ ಬಹಳಷ್ಟು ಸಾಮ್ಯತೆ ಇದೆ ಎನ್ನುತ್ತಿದ್ದರು. ಪ್ರಸ್ತುತ ಕಾಶ್ಮೀರದಲ್ಲಿ ಹಿಂದುಗಳನ್ನೇ ಆರಿಸಿ ಕಗ್ಗೊಲೆ ಮಾಡಿದ್ದಾರೆ. ಸಮಾನತೆ ಸಾರುವ ಸ್ವಾಮಿಗಳು ಇದಕ್ಕೆ ಏನು ಉತ್ತರ ಕೊಡುತ್ತಾರೆ ? ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಮುಸ್ಲಿಮರಿಗೆ ಶೇ.4 ಮೀಸಲಾತಿ ಕೊಟ್ಟಿದ್ದು ಸಂವಿಧಾನ ಬಾಹೀರ. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಬರುವುದಿಲ್ಲ. ಅದರ ಬದಲು ಹಿಂದುಗಳಲ್ಲೇ ವಾಲ್ಮೀಕಿ ಸಮುದಾಯಕ್ಕೋ, ಹಾಲುಮತ ಸಮುದಾಯಕ್ಕೋ ಅಥವಾ ಇನ್ಯಾವುದೋ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಕೊಡಲಿ ಎಂದರು.

ಸಿದ್ದರಾಮಯ್ಯ 25 ಸಾವಿರ ಮುಸ್ಲಿಂ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ಕಲಿಸಲು ಹೊರಟಿದ್ದಾರೆ. ಇದು ಮುಸ್ಲಿಮರಿಂದ ಹಿಂದು ಹೆಣ್ಣುಮಕ್ಕಳ ಮೆಲೆ ದಾಳಿ ಮಾಡಿಸುವ ಸಂಚು ಎಂದು ಅರೋಪಿಸಿದರು.

ವಿಜಯೇಂದ್ರಗೆ ಟಾಂಗ್

ಶಿವಮೊಗ್ಗದ ಒಬ್ಬ ಮಹಾನುಭಾವ ಶಿವಮೊಗ್ಗದಲ್ಲಿ ನಡೆದ ಯುವತಿಯ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ನಮ್ಮ ತಂದೆ ಈಗ ಸಿಎಂ ಆಗಿದ್ದಿದ್ದರೆ ಆರೋಪಿಯನ್ನು ಗುಂಡು ಹಾಕಿ ಕೊಲ್ಲುತ್ತಿದ್ದರು ಎಂಬ ಹೇಳಿಕೆ ಕೊಡುತ್ತಾನೆ. ನಿಮ್ಮ ತಂದೆಯೇ ಇದ್ದಾಗ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಪ್ರಕರಣ ಆಯ್ತು. ಶಿವಮೊಗ್ಗದ ಹಿಂದು ಕಾರ್ಯಕರ್ತ ಕೊಲೆಯಾಯ್ತು. ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣದ ಗುತ್ತಿಗೆಯನ್ನು ಮುಸ್ಲಿಮರಿಗೆ ಕೊಟ್ಟಿದ್ದು ಇವರೇ. ಮುಸ್ಲಿಂ ದೇಶವಾದ ದುಬೈನಲ್ಲಿ ಆಸ್ತಿ ಮಾಡಿದ್ದಾರೆ. ಇವರಿಗೆ ಹಿಂದುಗಳ ಪರ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net