ಯತ್ನಾಳ ಉಚ್ಛಾಟನೆ ಹಿಂಪಡೆಯಲು ಏ.10ರ ಗಡವು; ಬಸವರಾಜ ಹಾಲಪ್ಪನವರ

Panchamasali pc
Published on

ಹಾವೇರಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದ ಸಮಾಜದ ಜನರ ಮನಸಿಗೆ ನೋವುಂಟು ಮಾಡಿದೆ. ಈ ತೀರ್ಮಾನವನ್ನು ಏ.10ರೊಳಗೆ ಹಿಂಪಡೆಯಬೇಕು. ಇಲ್ಲದಿದ್ದರೆ, ಏ.13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಾಲಪ್ಪನವರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಕಟ್ಟಾಳು ಯತ್ನಾಳ ಅವರೂ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಸತ್ಯ ಮಾತನಾಡುವವರಿಗೆ ಬಿಜೆಪಿಯಲ್ಲಿ ಕಾಲವಿಲ್ಲವೆಂಬುದು ಗೊತ್ತಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2ಎ ಮೀಸಲಾತಿ ಹೋರಾಟಕ್ಕೆ ಯತ್ನಾಳ ಅವರು ಸಹಕಾರ ನೀಡಿದ್ದರು. ಕೆಲವು ಬಾರಿ ಮಾತನಾಡುವ ಸಂದರ್ಭದಲ್ಲಿ ಯತ್ನಾಳ ಅವರು ತಪ್ಪು ಮಾಡಿದ್ದಾರೆ. ನೋಟಿಸ್ ನೀಡಿದರೂ ಉತ್ತರಿಸಲು ಅವರಿಂದ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಉಚ್ಛಾಟನೆ ಮಾಡಿರುವುದು ಸರಿಯಲ್ಲ ಎಂದರು.

ಸದ್ಯದಲ್ಲೇ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗಳ ಚುನಾವಣೆಗಳು ಬರುತ್ತಿವೆ. ಹಾವೇರಿ, ಬಾಗಲಕೋಟೆ, ಕೊಪ್ಪಳ, ಬೀದರ್ ಹಾಗೂ ಎಲ್ಲ ಕಡೆಯೂ ಸಮಾಜದ ಜನರಿದ್ದಾರೆ. ಎಲ್ಲರೂ ಮನಸ್ಸು ಮಾಡಿದರೆ, ಬಿಜೆಪಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

ರಾಜಕೀಯ ಕ್ಷೇತ್ರದಲ್ಲಿ ಪಂಚಮಸಾಲಿ ನಾಯಕರು ಬೆಳೆಯಬೇಕು. ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಆದರೆ, ಪಂಚಮಸಾಲಿ ನಾಯಕರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಸಮಾಜದ ಜನರು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾಲತೇಶ ಬೆಳಕೇರಿ, ಎಚ್.ಸಿ ಸಿದ್ದನಗೌಡ, ವಿನಾಯಕ ಇಚ್ಚಂಗಿ, ಸಿ.ಪಿ ಜಾವಗಲ್, ಬಸವರಾಜ ಗಡೇಕರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net