

ಹಾವೇರಿ: ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ನಿರ್ಮಿಸಲಾಗಿರುವ ಪವರ್ ಸ್ಟಾರ್ ಪುನಿತ್ ರಾಜಕುಮಾರ ಅವರ ದೇಗುಲದ ಉದ್ಘಾಟನಾ ಸಮಾರಂಭ ಸೆ.26ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಅಪ್ಪು ಅವರ ಪತ್ನಿ ಅಶ್ವಿನಿ ಪುನಿತ್ ರಾಜಕುಮಾರ ಅವರಿಂದ ದೇವಸ್ಥಾನ ಲೋಕಾರ್ಪಣೆಯಾಗಲಿದೆ ಎಂದು ದೇಗುಲ ನಿರ್ಮಿಸಿರುವ ಅಪ್ಪು ಅಭಿಮಾನಿ ಪ್ರಕಾಶ ಮೊರಬದ ಹೇಳಿದರು.
ನಗರದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಗಚ್ಚ ಗ್ರಾಮದಲ್ಲಿ ನನ್ನ ಸ್ವಂತ ಹಣದಿಂದ ದೇಗುಲ ನಿರ್ಮಿಸಿದ್ದೇನೆ. ಅಪ್ಪು ಅವರ ಅಭಿಮಾನಿಗಳು 1.65 ಲಕ್ಷ ರೂ. ವೆಚ್ಚದಲ್ಲಿ ಅಪ್ಪು ಅವರ 6.5 ಅಡಿ ಎತ್ತರದ ಪುತ್ಥಳಿ ನಿರ್ಮಿಸುತ್ತಿದ್ದಾರೆ. ಒಟ್ಟಾರೆ 9 ಲಕ್ಷ ರೂ. ದೇಗುಲ ಮತ್ತು ಪುತ್ಥಳಿಗೆ ವ್ಯಯಿಸಲಾಗಿದೆ. ಅಪ್ಪು ಅಭಿಮಾನಿಗಳಿಂದ ಇದು ಸಾಧ್ಯವಾಗಿದೆ ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ, ಬೆಳಗ್ಗೆ 10 ಗಂಟೆಗೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ಅಪ್ಪು ಅಭಿಮಾನಿಗಳಿಂದ ಬೃಹತ್ ಬೈಕ್ ರ‌್ಯಾಲಿ ಆರಂಭವಾಗಲಿದೆ. ಅಶ್ವಿನಿ ಪುನಿತ್‌ರಾಜಕುಮಾರ ರ‌್ಯಾಲಿಗೆ ಚಾಲನೆ ನೀಡುವರು. ರ‌್ಯಾಲಿ ಮೂಲಕ ಯಲಗಚ್ಚ ಗ್ರಾಮಕ್ಕೆ ತೆರಳಿ ಪುನಿತ್ ಅವರ ದೇವಸ್ಥಾನದ ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ಗ್ರಾಮದ ಹೈಸ್ಕೂಲ್ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ಸ್ಥಳೀಯ ಶಾಸಕರು, ನಟ-ನಟಿಯರು, ಅಪ್ಪು ಅಭಿಮಾನಿಗಳು, ಸೇರಿದಂತೆ ಸಾವಿರಾರು ಜನ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯಲಗಚ್ಚ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಕುಂಬಾರಿ, ಡಾ.ಸತೀಶ ಈಳಗೇರ, ಮಹಾದೇವಿ ಮೊರಬದ, ಖುಷಿ ಮೊರಬದ, ಮಧು ಸಿರಿಗೆರೆ ಇದ್ದರು.