ಡಿಸಿಎಂ ಡಿಕೆಶಿ ಜೈಲಿಗೆ ಹೋಗುವುದು ಖಚಿತ; ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

Published on

ಹಾವೇರಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮೇಲೆ ಇರುವ ಸಿಬಿಐ ಕೇಸ್ ವಾಪಸ್ ಪಡೆಯಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅವರು ಜೈಲಿಗೆ ಹೋಗುವುದು ನಿಶ್ಚಿತ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರ ಕೇಸ್ ಮುಂದುವರೆಸಲು ಅಭ್ಯಂತರ ಇಲ್ಲ ಎಂದು ಕೋರ್ಟ್ ಹೇಳಿದೆ. ಅವರ ಮೇಲೆ ತನಿಖೆ ಶೇ.90ರಷ್ಟು ಮುಗಿದಿದ್ದು ಚಾರ್ಜ್‌ಶೀಟ್ ಮಾತ್ರ ಬಾಕಿ ಇದೆ. ಮೇಲ್ನೋಟಕ್ಕೆ ಅಕ್ರಮ ಹಣ ಸಂಪಾದನೆ ಮಾಡಿರುವುದು ಬಹಿರಂಗವಾಗಿದೆ. ನೂರಾರು ಕೋಟಿ ಹಣ ಸಿಕ್ಕಿರುವುದು ಇಡೀ ರಾಜ್ಯದ ಜನ ನೋಡಿದ್ದಾರೆ. ಸಿಬಿಐ ತನಿಖೆ ಆಗಿದೆ, ಅವರು ಜೈಲಿಗೆ ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.
ಅಧಿವೇಶನದ ಸಿದ್ದತೆ ಕುರಿತು ಮಾತನಾಡಿ, ನಮಗೆ ಅಧಿವೇಶನದಲ್ಲಿ ಮಾತಾಡಲು ಹತ್ತಾರು ವಿಷಯಗಳಿವೆ. ಈ ಸರ್ಕಾರ ರಾಜ್ಯದ ಜನರ ಸಮಸ್ಯೆ ಕೇಳುತ್ತಿಲ್ಲ. ಇದು ಅಭಿವೃದ್ಧಿ ಶೂನ್ಯ ಸರ್ಕಾರ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಇವರು ಬಡೆದಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸುತ್ತಿಲ್ಲ. ಈ ಕುರಿತು ನಮ್ಮ ಶಾಸಕರು ಧನಿ ಎತ್ತಲಿದ್ದಾರೆ ಎಂದರು.
ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿಲ್ಲ. ಗಣತಿಯ ಮೂಲ ಕಾಪಿ ಕಳ್ಳತನ ಆಗಿದೆ. ಈ ಬಗ್ಗೆ ಜಯಪ್ರಕಾಶ ಹೆಗಡೆ ಜತೆ ನಾನೇ ಮಾತಾಡಿದ್ದೇನೆ. ಸರ್ಕಾರ ಕೇಳಿದಾಗ ಕೊಡಲು ತಯಾರಿದ್ದೇವೆ ಎಂದಿದ್ದರು. ವರದಿಗೆ ಶ್ಯಾಮನೂರು ಶಿವಶಂಕರಪ್ಪ, ಡಿಕೆಶಿ ಸಹಿ ಹಾಕಿದ್ದಾರೆ. ಸಮಸ್ಯೆ ಸೃಷ್ಟಿ ಮಾಡಿದವರೇ ಸಿದ್ದರಾಮಯ್ಯ. ವರದಿ ಬಿಡುಗಡೆ ಮಾಡಿದರೆ ಅಂದೇ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net