ಮನೆ ಹಾನಿ, ಬೆಳೆ ಹಾನಿಗೆ ರಾಜ್ಯ ಸರ್ಕಾರ ಪರಿಹಾರ ಕೊಡಲಿ; ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

_DSC5997
Published on

ಹಾವೇರಿ: ಕಳೆದ ಹತ್ತು ದಿನಗಳಲ್ಲಿ ವ್ಯಾಪಕ ಮಳೆಯಾಗಿದೆ. ಅನೇಕ ಮನೆಗಳು ಬಿದ್ದಿವೆ. ರಾಜ್ಯದಲ್ಲಿ 40ಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ. ಮಳೆಹಾನಿ ಪ್ರದೇಶಕ್ಕೆ ಯಾರೂ ಭೇಟಿ ಕೊಡುತ್ತಿಲ್ಲ. ಬಿಜೆಪಿ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ಪರಿಹಾರ ವಿತರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆ ವಿಳಂಭದಿಂದ ಜೂನ್‌ನಲ್ಲಿ ಮಳೆ ಇಲ್ಲದೇ ಬೆಳೆ ಹಾನಿಗೀಡಾಗಿತ್ತು. ಜುಲೈನಲ್ಲಿ ಅತಿ ಹೆಚ್ಚು ಮಳೆಯಿಂದ ಬೆಳೆ ಹಾನಿಯಾಗಿದೆ. ಮಳೆ ಹಾನಿಗೆ ರಾಜ್ಯ ಸರ್ಕಾರ ತುರ್ತು ಪರಿಹಾರ ಕೊಡಬೇಕು ಎಂದರು.
ಗೃಹ ಸಚಿವರು ಹೆಣ್ಣು ಮಕ್ಕಳ ವಿಚಾರದಲ್ಲಿ ಇಷ್ಟು ಹಗುರವಾಗಿ ಮಾತನಾಡಿದ್ದಾರೆ. ತನಿಖೆಗೂ ಮೊದಲೇ ಏನೂ ಆಗಿಲ್ಲ ಎನ್ನುತ್ತಾರೆ. ಹಾಗಾದರೆ, ವಾರದ ನಂತರ ಎಫ್‌ಐಆರ್ ಯಾಕೆ ಮಾಡಿದರು. ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆದಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಪ್ರಕರಣ ಬೇರೆ. ಹೋರಾಟಗಾರರ ಪ್ರಕರಣಗಳು ಬೇರೆ. ಒಲೈಕೆ ರಾಜಕಾರಣಕ್ಕಾಗಿ, ದಂಗೆಕೋರರನ್ನ ಕೈಬಿಡುತ್ತೀರಿ ಅಂದರೆ ಸರ್ಕಾರ ಯಾರ ಪರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಬೊಮ್ಮಾಯಿ ಟೀಕಿಸಿದರು.
ಮುಖ್ಯಮಂತ್ರಿಗೆ ತಿರುಗೇಟು
‘ಸಿಎಂ ಆಡಳಿತ ಮಾಡಿರುವ ಜಿಲ್ಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾವೇರಿಗೆ ಬಂದಾಗ ಹೇಳಿದ್ದರು. ಹಿಂದೆ ನೀವು 2013ರಲ್ಲಿ ಸಿಎಂ ಆಗಿದ್ದಾಗ ಹಾವೇರಿಗೆ ಬಂದಿದ್ದ ಮೆಡಿಕಲ್ ಕಾಲೇಜ್ ಅನ್ನು ಗದಗ ಜಿಲ್ಲೆಗೆ ಕೊಟ್ಟಿದ್ದನ್ನು ಮರೆಯದಿರಿ. ಹಾವೇರಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಕೊಟ್ಟಿದ್ದು ನಾವು, ನೀರಾವರಿ ಯೋಜನೆಗಳನ್ನು ಕೊಟ್ಟಿದ್ದು ನಮ್ಮ ಸರ್ಕಾರ. ಜಿಲ್ಲೆಯ ಅಭಿವೃದ್ಧಿಗೆ ಏನೆಲ್ಲ ಮಾಡಬೇಕು ಎಲ್ಲವನ್ನು ನಾನು ಮಾಡಿದ್ದೇನೆ. ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಯಾವುದೇ ಇಲಾಖೆಯ ಕಾಮಗಾರಿಯಲ್ಲಿ ಹಗರಣ ನಡೆದಿದ್ದರೆ ಎಸ್‌ಐಟಿ ತನಿಖೆಗೆ ಕೊಡಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು.
ಗೊಂದಲದಲ್ಲಿ ಕಾಂಗ್ರೆಸ್ ಸರ್ಕಾರ
ರಾಜ್ಯ ಸರ್ಕಾರ ಮೊದಲ ದಿನದಿಂದಲೂ ಗೊಂದಲದಲ್ಲಿದೆ. ಶಾಸಕರು, ಸಚಿವರ ನಡುವೆ ಸಮನ್ವಯ ಇಲ್ಲವೆಂಬುದು ಸ್ಪಷ್ಟವಾಗಿದೆ. ತೇಪೆ ಹಚ್ಚುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಎಲ್ಲವೂ ಸರಿ ಇದ್ದಿದ್ದರೆ ಹೈಕಮಾಂಡ್ ಯಾಕೆ ಬುಲಾವ್ ಮಾಡುತ್ತಿತ್ತು. ಗುರುವಾರದ ಸಭೆಯಲ್ಲಿ ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಅನುದಾನ ಕೊಡುವುದರಲ್ಲಿ ಗೊಂದಲ, ಗ್ಯಾರಂಟಿ ಅನುಷ್ಠಾನದಲ್ಲಿ ಗೊಂದಲ, ಆಡಳಿತದಲ್ಲಿ ಗೊಂದಲ ಇದೆ. ಬಹಳ ದೊಡ್ಡ ಭಿನ್ನಾಭಿಪ್ರಾಯ ಇದೆ ಎಂದರು ಬೊಮ್ಮಾಯಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net